ADVERTISEMENT

ಪಶ್ಚಿಮ ಬಂಗಾಳ: EC ಸೂಚನೆ ನಂತರ 24 ಗಂಟೆಯಲ್ಲಿ DG ಬದಲು: ಸಂಜಯ್ ಮುಖರ್ಜಿಗೆ ಹೊಣೆ

ಪಿಟಿಐ
Published 19 ಮಾರ್ಚ್ 2024, 14:12 IST
Last Updated 19 ಮಾರ್ಚ್ 2024, 14:12 IST
<div class="paragraphs"><p>ಸಂಜಯ್ ಚಕ್ರವರ್ತಿ</p></div>

ಸಂಜಯ್ ಚಕ್ರವರ್ತಿ

   

ಎಕ್ಸ್ ಖಾತೆ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ವಿವೇಕ್ ಸಹಾಯ್ ಅವರನ್ನು ಬದಲಿಸಲು ಸೂಚಿಸಿದ 24 ಗಂಟೆಯೊಳಗಾಗಿ, ಡಿಜಿ ಹುದ್ದೆಗೆ ಸಂಜಯ್ ಮುಖರ್ಜಿ ಅವರನ್ನು ನೇಮಿಸಿ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಆದೇಶಿಸಿದೆ.

ADVERTISEMENT

ಐಪಿಎಸ್ ಕೇಡರ್‌ನಲ್ಲಿ ಸಂಜಯ್ ಅವರು ವಿವೇಕ್ ಅವರಿಗಿಂತ ಒಂದು ವರ್ಷ ಕಿರಿಯರು. ಈ ಬದಲಾವಣೆ ಮೂಲಕ ಪೊಲೀಸ್ ಮಹಾನಿರ್ದೇಶಕರಾಗಿ ಕಡಿಮೆ ಅವಧಿಗೆ ಕರ್ತವ್ಯ ನಿರ್ವಹಿಸಿದವರಲ್ಲಿ ಸಂಜಯ್ ಅಗ್ರಸ್ಥಾನದಲ್ಲಿದ್ದಾರೆ.

1988ರ ಐಪಿಎಸ್ ತಂಡದ ಅಧಿಕಾರಿಯಾದ ಸಹಾಯ್ ಅವರು, ಇಲಾಖೆಯಲ್ಲಿನ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದಾರೆ. ಮೇ 31ರಂದು ಅವರು ನಿವೃತ್ತರಾಗಲಿದ್ದಾರೆ. ಆದರೆ ಜೂನ್ 4ರವರೆಗೂ ಚುನಾವಣೆ ಮುಂದುವರಿಯುವುದರಿಂದ, ಚುನಾವಣಾ ಆಯೋಗವು ಅವರ ಸ್ಥಾನದಲ್ಲಿ 1989ರ ಐಪಿಎಸ್ ತಂಡದ ಅಧಿಕಾರಿ ಮುಖರ್ಜಿ ಅವರನ್ನು ಡಿಜಿಪಿ ಹುದ್ದೆಗೆ ನೇಮಿಸಲು ಸೂಚಿಸಿತ್ತು.

ಸದ್ಯ ಮುಖರ್ಜಿ ಅವರು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಡಿಜಿಪಿ ಆಗಿದ್ದಾರೆ. ಪೊಲೀಸ್ ಮಹಾನಿರ್ದೇಶಕರ ಬದಲಾವಣೆಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೂಚಿಸಿದ ನಂತರ ರಾಜ್ಯ ಸರ್ಕಾರ ಶಿಫಾರಸು ಮಾಡಿದ ಮೂರು ಹೆಸರುಗಳಲ್ಲಿ ಮುಖರ್ಜಿ ಅವರ ಹೆಸರು 2ನೆಯದಾಗಿತ್ತು ಎಂದು ವರದಿಯಾಗಿದೆ.

2021ರ ಮಾರ್ಚ್‌ನಲ್ಲಿ ಭದ್ರತಾ ವಿಭಾಗದ ನಿರ್ದೇಶಕರಾಗಿದ್ದ ವಿವೇಕ್ ಸಹಾಯ್ ಅವರನ್ನು ಕೇಂದ್ರ ಚುನಾವಣಾ ಆಯೋಗವು ಅಮಾನತು ಮಾಡಿತ್ತು. ಆ ಸಂದರ್ಭದಲ್ಲಿ ನಂದಿಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿದ್ದ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಪೆಟ್ಟಾಗಿತ್ತು. ಘಟನೆ ಕುರಿತು ರಾಜ್ಯ ಮುಖ್ಯಕಾರ್ಯದರ್ಶಿ ನೀಡಿದ ವರದಿ ಆಧರಿಸಿ ಸಹಾಯ್ ಅವರನ್ನು ಆಯೋಗವು ಅಮಾನತು ಮಾಡಿತ್ತು.

2016ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಚುನಾವಣಾ ಕರ್ತವ್ಯ ನಿರ್ವಹಿಸುವಲ್ಲಿ ಆದ ಲೋಪಗಳಿಗೆ ಸಹಾಯ್ ಕ್ರಮ ಎದುರಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.

ಚುನಾವಣಾ ಆಯೋಗದ ಸೂಚನೆಯಂತೆ ಸಂಜಯ್ ಅವರಿಗೆ ಚುನಾವಣಾ ಕರ್ತವ್ಯ ಹೊರತುಪಡಿಸಿ ಬೇರೆ ಕರ್ತವ್ಯವನ್ನು ನೀಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.