ನವದೆಹಲಿ: ಚುನಾವಣಾ ಆಯೋಗವು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧರಿತ ಚಲನಚಿತ್ರ (ಬಯೊಪಿಕ್) ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ತಡೆಯೊಡ್ಡಿದೆ. ಚುನಾವಣೆ ಋತುಮಾನ ಮುಗಿಯುವವರೆಗೆ ಚಿತ್ರದ ಬಿಡುಗಡೆ ಸಲ್ಲದು ಎಂದು ಆಯೋಗ ಹೇಳಿದೆ.
ಯಾವುದೇ ರಾಜಕೀಯ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಉದ್ದೇಶಕ್ಕೆ ಇಂಬು ನೀಡುವ ಚಿತ್ರಗಳನ್ನು ಈ ಅವಧಿಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಡುಗಡೆ ಮಾಡುವುದು ಸಲ್ಲದು ಎಂದು ಆಯೋಗವು ಅಭಿಪ್ರಾಯಪಟ್ಟಿದೆ.
ಗುರುವಾರ (ಏ.11ರಂದು) ಚಿತ್ರ ಥಿಯೇಟರ್‌ಗಳಲ್ಲಿ ತೆರೆ ಕಾಣಬೇಕಿತ್ತು. ಅದಕ್ಕೆ ಒಂದು ದಿನ ಮೊದಲು ಆಯೋಗದ ಆದೇಶ ಹೊರಬಿದ್ದಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆಯಿಂದ ಆರಂಭವಾಗಲಿದೆ.
ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಈ ಸಂಬಂಧ ದಾಖಲಿಸಿದ್ದ ಅರ್ಜಿಯನ್ನು ಮಂಗಳವಾರ ವಜಾ ಮಾಡಿದ್ದ ಸುಪ್ರೀಂಕೋರ್ಟ್ ಈ ವಿಚಾರವನ್ನು ಇತ್ಯರ್ಥಪಡಿಸಲು ಚುನಾವಣಾ ಆಯೋಗವೇ ಸೂಕ್ತ ವೇದಿಕೆ ಎಂದು ಅಭಿಪ್ರಾಯಪಟ್ಟಿತ್ತು.
‘ಸಿನಿಮಾ ಇನ್ನೂ ಸೆನ್ಸಾರ್ ಮಂಡಳಿಯ ಅನುಮತಿಪತ್ರ ಪಡೆದಿಲ್ಲ. ಹೀಗಾಗಿ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
‘ಒಂದು ವೇಳೆ ಸಿನಿಮಾ ಏ.11ರಂದು ತೆರೆಗೆ ಬರುವುದು ಖಚಿತವಾದರೆ ಅರ್ಜಿದಾರರು ಚುನಾವಣಾ ಆಯೋಗದ ಮೊರೆ ಹೋಗಬೇಕು’ ಸುಪ್ರೀಂಕೋರ್ಟ್ ಸೂಚಿಸಿತ್ತು. ಇದೀಗ ಚುನಾವಣಾ ಆಯೋಗವು ಚಿತ್ರ ಬಿಡುಗಡೆಗೆತಡೆ ನೀಡುವುದರೊಂದಿಗೆ ಪ್ರಕರಣ ಇತ್ಯರ್ಥವಾದಂತೆ ಆಗಿದೆ.
‘ಲೋಕಸಭೆ ಚುನಾವಣೆ ಮುಗಿಯುವವರೆಗೆ ಬಯೋಪಿಕ್ ಬಿಡುಗಡೆಗೆ ಅವಕಾಶ ನೀಡಬಾರದು. ಇಂಥ ಚಿತ್ರಗಳು ಜನರ ಮೇಲೆ ಪರಿಣಾಮ ಬೀರಬಲ್ಲದು’ ಎಂದು ಅರ್ಜಿದಾರರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.