ನವದೆಹಲಿ/ ಚೆನ್ನೈ: ತಮಿಳುನಾಡಿನ ತಿರುವರೂರ್ ವಿಧಾನಸಭಾ ಕ್ಷೇತ್ರಕ್ಕೆ ಇದೇ 28ರಂದು ನಡೆಯಬೇಕಿದ್ದ ಉಪ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ರದ್ದುಪಡಿಸಿದೆ.
ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯಲ್ಲಿ ಉಪಚುನಾವಣೆ ರದ್ದುಪಡಿಸಿರುವುದಾಗಿ ಹೇಳಲಾಗಿದೆ. ಡಿಎಂಕೆ ನಾಯಕ ಎಂ.ಕರುಣಾನಿಧಿಯವರು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರಕ್ಕೆ ಅವರ ನಿಧನದ ನಂತರ ಉಪಚುನಾವಣೆ ನಿಗದಿಯಾಗಿತ್ತು. ಹಿಂದಿನ ವರ್ಷದ ನವೆಂಬರ್‌ನಲ್ಲಿ ಅಪ್ಪಳಿಸಿದ ಗಾಜ ಚಂಡಮಾರುತದಿಂದ ಈ ಕ್ಷೇತ್ರದ ಜನರು ಸಂತ್ರಸ್ತರಾಗಿದ್ದು, ಪರಿಹಾರ ಕಾರ್ಯಗಳು ನಡೆಯುತ್ತಿರುವುದರಿಂದ ಸದ್ಯಕ್ಕೆ ಉಪಚುನಾವಣೆ ಮುಂದೂಡಬೇಕೆಂದು ರಾಜಕೀಯ ಪಕ್ಷಗಳು ಆಯೋಗಕ್ಕೆ ಮನವಿ ಮಾಡಿದ್ದವು.
ಉಪ ಚುನಾವಣೆಯ ಹೊಸ ದಿನಾಂಕವನ್ನು ಪುನಃ ನಿಗದಿಪಡಿಸಿ, ಹೊಸದಾಗಿ ಆದೇಶ ಹೊರಡಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಮತ್ತು ಆಯುಕ್ತ ಅಶೋಕ್ ಲವಾಸ ಹೇಳಿದ್ದಾರೆ.
‘ಕೇಂದ್ರ ಚುನಾವಣಾ ಆಯೋಗದ ಆದೇಶಾನುಸಾರ ತಿರುವರೂರ್ ಕ್ಷೇತ್ರದ ಉಪಚುನಾವಣೆ ರದ್ದುಪಡಿಸಲಾಗಿದೆ’ ಎಂದು ತಮಿಳುನಾಡು ಮುಖ್ಯ ಚುನಾವಣಾಧಿಕಾರಿ ಎನ್.ಸತ್ಯವ್ರತ ಶಾಹೊ ಚೆನ್ನೈನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.