ADVERTISEMENT

ವಿವಿಪಿಎಟಿ: ಜೈರಾಮ್ ರಮೇಶ್ ಕಳವಳ ಆಧಾರರಹಿತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 15:44 IST
Last Updated 5 ಜನವರಿ 2024, 15:44 IST
<div class="paragraphs"><p>ಜೈರಾಮ್ ರಮೇಶ್</p></div>

ಜೈರಾಮ್ ರಮೇಶ್

   

ಪಿಟಿಐ ಚಿತ್ರ

ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಜೊತೆ ಬಳಕೆಮಾಡುವ ವಿವಿ‍ಪ್ಯಾಟ್‌ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ವ್ಯಕ್ತಪಡಿಸಿದ್ದ ಕಳವಳಗಳಿಗೆ ಆಧಾರ ಇಲ್ಲ ಎಂದು ಹೇಳಿರುವ ಚುನಾವಣಾ ಆಯೋಗವು, ರಮೇಶ್ ಅವರು ‘ಇನ್ನಷ್ಟು ಸ್ಪಷ್ಟೀಕರಣದ ಅಗತ್ಯವಿರುವ ಯಾವುದೇ ತರ್ಕಬದ್ಧ ಅನುಮಾನವನ್ನು ವ್ಯಕ್ತಪಡಿಸಿಲ್ಲ’ ಎಂದು ತಿಳಿಸಿದೆ.

ADVERTISEMENT

ಅಲ್ಲದೆ, ವಿವಿಪ್ಯಾಟ್‌ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಆಡಳಿತ ಇದ್ದಾಗಲೇ (2013ರಲ್ಲಿ) ಜಾರಿಗೆ ತರಲಾಗಿತ್ತು ಎಂದು ಹೇಳಿದೆ.

ಚುನಾವಣೆಗಳಲ್ಲಿ ಇವಿಎಂ ಬಳಕೆ ವಿಚಾರದಲ್ಲಿ ಆಯೋಗವು ಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. ದೇಶದ ಚುನಾವಣೆಗಳಲ್ಲಿ ಇವಿಎಂ ಬಳಕೆ ವಿಚಾರವಾಗಿ ಇರುವ ತರ್ಕಸಹಿತವಾದ ಎಲ್ಲ ಪ್ರಶ್ನೆಗಳಿಗೂ ಇತ್ತೀಚೆಗೆ ಪರಿಷ್ಕರಿಸಿ ಪ್ರಕಟಿಸಲಾಗಿರುವ ಎಫ್‌ಎಕ್ಯೂ (ಇವಿಎಂ ಬಳಕೆ ಕುರಿತ ಪ್ರಶ್ನೆಗಳು ಹಾಗೂ ಅವುಗಳಿಗೆ ವಿವರಣೆ) ಉತ್ತರ ನೀಡಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ವಿವಿಪ್ಯಾಟ್‌ ಹಾಗೂ ಮತ ಚಲಾವಣೆಗೆ ಸಂಬಂಧಿಸಿದ ಮುದ್ರಿತ ಚೀಟಿ ಕುರಿತ ನಿಯಮಗಳನ್ನು ಕಾಂಗ್ರೆಸ್ ಪಕ್ಷವು 2013ರ ಆಗಸ್ಟ್‌ 14ರಂದು ರೂಪಿಸಿತ್ತು ಎಂದು ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಶರ್ಮ ಅವರು ರಮೇಶ್ ಅವರಿಗೆ ರವಾನಿಸಿರುವ ಪತ್ರದಲ್ಲಿ ಹೇಳಿದ್ದಾರೆ.

ವಿವಿಪ್ಯಾಟ್‌ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಲು ‘ಇಂಡಿಯಾ’ ಮೈತ್ರಿಕೂಟದ ಪ್ರತಿನಿಧಿಗಳಿಗೆ ಅವಕಾಶ ನೀಡಬೇಕು ಎಂದು ರಮೇಶ್ ಅವರು ಡಿಸೆಂಬರ್ 30ರಂದು ಬರೆದ ಪತ್ರದಲ್ಲಿ ಆಯೋಗವನ್ನು ಕೋರಿದ್ದರು. ಡಿಸೆಂಬರ್ 19ರ ಸಭೆಯಲ್ಲಿ, ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ‘ಇಂಡಿಯಾ’ ಮೈತ್ರಿಕೂಟವು ವಿವಿಪ್ಯಾಟ್‌ ಚೀಟಿಗಳನ್ನು ಮತದಾರರ ಕೈಗೆ ನೀಡಬೇಕು, ಅವರು ಅದನ್ನು ಬೇರೊಂದು ಪೆಟ್ಟಿಗೆಯಲ್ಲಿ ಹಾಕುವ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿತ್ತು.

ಇವಿಎಂನಲ್ಲಿ ದಾಖಲಾಗುವ ಮತಗಳ ವಿವರ ಹಾಗೂ ವಿವಿಪ್ಯಾಟ್‌ ಯಂತ್ರದಿಂದ ಸಿಗುವ ಚೀಟಿಯನ್ನು ಪೂರ್ತಿಯಾಗಿ ತಾಳೆ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಕೂಡ ಮೈತ್ರಿಕೂಟವು ಆಗ್ರಹಿಸಿತ್ತು. ರಮೇಶ್ ಅವರು ಬರೆದಿರುವ ಪತ್ರವು, ಇದುವರೆಗೆ ಉತ್ತರ ನೀಡದೆ ಇರುವ ಯಾವುದೇ ಪ್ರಶ್ನೆಯನ್ನು ಹೊಸದಾಗಿ ಎತ್ತಿಲ್ಲ ಎಂದು ಶರ್ಮ ಅವರು ಹೇಳಿದ್ದಾರೆ.

ಇವಿಎಂ ಬಳಕೆಯ ಪ್ರತಿ ಹಂತದಲ್ಲಿಯೂ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಭಾಗಿಯಾಗಿರುತ್ತಾರೆ ಎಂದು ಕೂಡ ಆಯೋಗವು ಪತ್ರದಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.