ನವದೆಹಲಿ: ಮುಚ್ಚಿದ ಲಕೋಟೆಯಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಚುನಾವಣಾ ಬಾಂಡ್‌ಗಳ ಕುರಿತಾದ ಹೊಸ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
ಈ ಹೊಸ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ಆಡಳಿತಾರೂಢ ಬಿಜೆಪಿ, ಚುನಾವಣಾ ಬಾಂಡ್‌ಗಳ ಮೂಲಕ ₹6,986.5 ಕೋಟಿ ಪಡೆದುಕೊಂಡಿದೆ. 2019–20ರ ಅವಧಿಯಲ್ಲಿ ಅತ್ಯಧಿಕ ₹2,555 ಕೋಟಿ ಪಡೆದುಕೊಂಡಿದೆ ಎಂದು ಚುನಾವಣಾ ಅಯೋಗದ ಅಂಕಿ ಅಂಶದಿಂದ ತಿಳಿದುಬಂದಿದೆ.
ತೃಣಮೂಲ ಕಾಂಗ್ರೆಸ್ ಪಕ್ಷವು 2ನೇ ಸ್ಥಾನದಲ್ಲಿದ್ದು, ಚುನಾವಣಾ ಬಾಂಡ್ ಮೂಲಕ ₹1,397 ಕೋಟಿ ಪಡೆದುಕೊಂಡಿದೆ.ಕಾಂಗ್ರೆಸ್ ₹1,334.35 ಕೋಟಿ ಪಡೆದಿದೆ.
ಡಿಎಂಕೆ ಪಕ್ಷ ₹656.5 ಕೋಟಿ ಪಡೆದುಕೊಂಡಿದ್ದರೆ, ಅದರಲ್ಲಿ ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ಸ್ ಫ್ಯೂಚರ್ ಗೇಮಿಂಗ್‌ನಿಂದಲೇ ₹ 509 ಕೋಟಿ ಚುನಾವಣಾ ಬಾಂಡ್‌ನಿಂದ ಪಡೆದುಕೊಂಡಿದೆ.
ಬಿಜೆಡಿಗೆ ₹944.5 ಕೋಟಿ, ವೈಎಸ್‌ಆರ್ ಕಾಂಗ್ರೆಸ್‌ಗೆ ₹442.8 ಕೋಟಿ, ಟಿಡಿಪಿಗೆ ₹181.35 ಕೋಟಿ ಬಂದಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜಕೀಯ ಪಕ್ಷಗಳು ಮುಚ್ಚಿದ ಲಕೋಟೆಯಲ್ಲಿ ಅಂಕಿ ಅಂಶ ಸಲ್ಲಿಸಿವೆ ಎಂದು ಆಯೋಗ ತಿಳಿಸಿದೆ.
'ರಾಜಕೀಯ ಪಕ್ಷಗಳಿಂದ ಪಡೆದ ಅಂಕಿ ಅಂಶವನ್ನು ತೆರೆಯದೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. 2024, ಮಾರ್ಚ್ 15ರ ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಭೌತಿಕ ಪ್ರತಿಗಳು, ಡಿಜಿಟಲೀಕರಣಗೊಂಡ ದಾಖಲೆಯನ್ನು ಪೆನ್ ಡ್ರೈವ್ ಮೂಲಕ ಹಿಂದಿರುಗಿಸಿದ್ದಾರೆ. ಅದರನ್ವಯ, ಡಿಜಿಟಲೀಕರಣಗೊಂಡ ಅಂಕಿ ಅಂಶವನ್ನು ಚುನಾವಣಾ ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ’ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
₹6 ಕೋಟಿ ಪಡೆದಿರುವ ಎಐಎಡಿಎಂಕೆಗೆ ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದಲೂ ದೇಣಿಗೆ ಲಭಿಸಿದೆ. ಸಿಪಿಎಂ, ಸಿಪಿಐ, ಬಿಎಸ್‌ಪಿ, ಫಾರ್ವರ್ಡ್ ಬ್ಲಾಕ್, ಎಐಎಂಐಎಂ, ಎಐಯುಡಿಎಫ್, ಎಂಎನ್‌ಎಸ್, ಮುಸ್ಲಿಂ ಲೀಗ್ ಮತ್ತು ಐಎನ್‌ಎಲ್‌ಡಿ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದಿಲ್ಲ ಎಂದು ಘೋಷಿಸಿಕೊಂಡಿವೆ.
ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳು ದೇಣಿಗೆ ನೀಡಿದವರ ಮಾಹಿತಿ ಬಹಿರಂಗಪಡಿಸದ ಕಾರಣ, ಫ್ಯೂಚರ್ ಗೇಮಿಂಗ್ ಖರೀದಿಸಿದ ಬಾಕಿ ₹859 ಕೋಟಿ ಮೌಲ್ಯದ ಬಾಂಡ್‌ಗಳ ಫಲಾನುಭವಿಗಳು ಯಾರೆಂಬುದು ತಿಳಿದುಬಂದಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡಿದ್ದ ವಿವರಗಳ ಆಧಾರದಲ್ಲಿ ಚುನಾವಣಾ ಆಯೋಗವು ಮಾರ್ಚ್ 14 ರಂದು ಬಿಡುಗಡೆಗೊಳಿಸಿದ್ದ ಮಾಹಿತಿಯು, 2019ರ ಏಪ್ರಿಲ್ 12ರಿಂದ 2024ರ ಫೆಬ್ರುವರಿ 15ರ ವರೆಗಿನ (ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸುವವರೆಗಿನ) ಅವಧಿಗೆ ಸಂಬಂಧಿಸಿದ್ದಾಗಿತ್ತು.
ಈಗ ಬಹಿರಂಗಗೊಂಡಿರುವ ಮಾಹಿತಿಯು ಈ ಯೋಜನೆಯ (2018) ಆರಂಭದಿಂದ 2023ರ ನವೆಂಬರ್‌ವರೆಗಿನ ಅವಧಿಯಲ್ಲಿ ಪಕ್ಷಗಳು ಪಡೆದ ದೇಣಿಗೆಗೆ ಸಂಬಂಧಿಸಿದ್ದಾಗಿದೆ. ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ 2023ರ ಅಕ್ಟೋಬರ್‌ನಿಂದ 2024ರ ಫೆಬ್ರುವರಿವರೆಗಿನ ಅವಧಿಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
ಚುನಾವಣಾ ಆಯೋಗ ಈ ಹಿಂದೆ ಬಿಡುಗಡೆಗೊಳಿಸಿದ್ದ ಪಟ್ಟಿಯಲ್ಲಿ ಯಾವ ಪಕ್ಷಗಳಿಗೆ ಯಾರು ದೇಣಿಗೆ ನೀಡಿದ್ದಾರೆ ಎಂಬ ವಿವರ ಇರಲಿಲ್ಲ. ಈಗ ಹಂಚಿಕೊಂಡಿರುವ ಮಾಹಿತಿಯಲ್ಲಿ ಕೆಲವು ಪಕ್ಷಗಳು ಯಾರಿಂದ ದೇಣಿಗೆ ಪಡೆದಿವೆ ಎಂಬ ವಿವರಗಳು ಲಭ್ಯವಾಗಿವೆ.
ಬಿಜೆಪಿಗೆ ಸಿಂಹಪಾಲು: ಬಿಜೆಪಿಯು ಚುನಾವಣಾ ಬಾಂಡ್ ಮೂಲಕ ಅತಿಹೆಚ್ಚು ದೇಣಿಗೆ ಪಡೆದಿದೆ. 2019–20ರ ಅವಧಿಯೊಂದರಲ್ಲೇ ಪಕ್ಷಕ್ಕೆ ದೇಣಿಗೆ ರೂಪದಲ್ಲಿ ₹2,555 ಕೋಟಿ ಹರಿದುಬಂದಿದೆ. 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಬಿಜೆಪಿಗೆ ₹421.27 ಕೋಟಿ ದೇಣಿಗೆ ದೊರೆತಿದೆ.
ಬಾಂಡ್ ಯೋಜನೆ ಜಾರಿಯಲ್ಲಿದ್ದ ಒಟ್ಟು ಅವಧಿಯಲ್ಲಿ (ಮಾರ್ಚ್ 2018ರಿಂದ ಜನವರಿ 2024) ಬಿಜೆಪಿ ಒಟ್ಟು ₹7,800 ಕೋಟಿ ದೇಣಿಗೆ ಪಡೆದಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇತ್ತೀಚೆಗೆ ಪ್ರಕಟಿಸಿದ ವರದಿಯಲ್ಲಿ ಹೇಳಿತ್ತು.
ಆಸಕ್ತಿದಾಯಕ ಅಂಶವೆಂದರೆ, ಬಿಜೆಪಿ ಬಳಿಕ ಎರಡನೇ ಅತಿಹೆಚ್ಚು ದೇಣಿಗೆಯನ್ನು (₹1,396.94 ಕೋಟಿ) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಡೆದಿದೆ. ಕಾಂಗ್ರೆಸ್ ಪಕ್ಷ (₹1,334.36) ಮೂರನೇ ಸ್ಥಾನದಲ್ಲಿದೆ. ಟಿಡಿಪಿ ₹181.35 ಕೋಟಿ, ಎಎಪಿ ₹70.79 ಕೋಟಿ, ಶಿವಸೇನೆ ₹60.4 ಕೋಟಿ, ಆರ್‌ಜೆಡಿ ₹56 ಕೋಟಿ ಮತ್ತು ಎನ್‌ಸಿಪಿಎಗೆ ₹50.51 ಕೋಟಿ ದೇಣಿಗೆ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.