ADVERTISEMENT

ಇವಿಎಂಗಳ ದುರ್ಬಳಕೆ | ಕಾಂಗ್ರೆಸ್‌ ಪ್ರಶ್ನೆಗೆ EC ಸ್ಪಷ್ಟೀಕರಣ ನೀಡಲಿ: ಸಿಬಲ್

ಪಿಟಿಐ
Published 13 ಅಕ್ಟೋಬರ್ 2024, 11:42 IST
Last Updated 13 ಅಕ್ಟೋಬರ್ 2024, 11:42 IST
ಕಪಿಲ್ ಸಿಬಲ್
ಕಪಿಲ್ ಸಿಬಲ್   

ನವದೆಹಲಿ: ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಳಕೆಯಾದ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಕಾಂಗ್ರೆಸ್‌ ಎತ್ತಿರುವ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಲೇಬೇಕು ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಭಾನುವಾರ ಒತ್ತಾಯಿಸಿದರು.

‘ಚುನಾವಣೆಯಲ್ಲಿ ಇವಿಎಂಗಳ ದುರ್ಬಳಕೆಯಾಗಿದೆ ಎಂದು ನನಗೂ ಅನಿಸುತ್ತಿದೆ. ಆರಂಭದಿಂದಲೂ ನಾನು ಇವಿಎಂಗಳ ವಿರುದ್ಧವಾಗಿದ್ದೇನೆ. ಈ ಹಿಂದೆಯೂ ಈ ಬಗ್ಗೆ ಮಾತನಾಡಿದ್ದೆ’ ಎಂದು ಅವರು ಹೇಳಿದರು.

ಹರಿಯಾಣದ ಚುನಾವಣೆಯ ಮತಎಣಿಕೆ ಸಂದರ್ಭದಲ್ಲಿ ಕೆಲವು ಇವಿಎಂಗಳಲ್ಲಿ ಕಂಡುಬಂದ ವ್ಯತ್ಯಾಸಗಳ ಬಗ್ಗೆ ವಿಸ್ತೃತವಾದ ತನಿಖೆ ಆಗಬೇಕು ಎಂದು ಕಾಂಗ್ರೆಸ್‌ ದೂರುಗಳನ್ನು ನೀಡಿದೆ. ಮತ ಎಣಿಕೆಯ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಇವಿಎಂಗಳಲ್ಲಿ ಶೇ 99ರಷ್ಟು ಬ್ಯಾಟರಿ ಚಾರ್ಜ್‌ ಇತ್ತು ಎಂದು ಕನಿಷ್ಠ 20 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳು ಆಯೋಗಕ್ಕೆ ದೂರು ನೀಡಿದ್ದಾರೆ.

ADVERTISEMENT

‘ಭಾಗವತ್‌ ಹೇಳಿಕೆಗೂ ಸರ್ಕಾರದ ಕೆಲಸಕ್ಕೂ ಅಸಂಬದ್ಧ’:

ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ವಿಜಯದಶಮಿ ದಿನ ನೀಡಿದ ಹೇಳಿಕೆಗೂ ಬಿಜೆಪಿ ನೇತೃತ್ವದ ಸರ್ಕಾರದ ವರ್ತನೆಗೂ ವಾಸ್ತವದಲ್ಲಿ ಭಾರಿ ವ್ಯತ್ಯಾಸ ಇದೆ ಎಂದು ಸಿಬಲ್ ಹೇಳಿದರು.

ಭಾಗವತ್‌ ಅವರು ಶನಿವಾರ, ಈಚಿನ ವರ್ಷಗಳಲ್ಲಿ ಭಾರತ ಹೆಚ್ಚು ಬಲಿಷ್ಠವಾಗಿದೆ, ಹೆಚ್ಚಿನ ವಿಶ್ವಾಸಾರ್ಹತೆಯೊಂದಿಗೆ ಜಗತ್ತಿನಲ್ಲಿ ಹೆಚ್ಚು ಗೌರವಕ್ಕೆ ಪಾತ್ರವಾಗಿದೆ. ಆದರೆ ದುಷ್ಟ ಪಿತೂರಿಗಳು ದೇಶದ ದೃಢ ನಿಶ್ಚಯವನ್ನು ಪರೀಕ್ಷೆಗೆ ಒಡ್ಡುತ್ತಿವೆ. ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಎಲ್ಲ ದಿಕ್ಕುಗಳಿಂದಲೂ ವೇಗ ಪಡೆದುಕೊಳ್ಳುತ್ತಿವೆ ಎಂದು ಹೇಳಿದ್ದರು.

ಸಿಬಲ್ ಅವರು ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ‘ವಾಲ್ಮೀಕಿ ಅವರು ರಾಮಾಯಣವನ್ನು ಬರೆದಿದ್ದಾರೆ. ಹಿಂದೂಗಳೆಲ್ಲರೂ ವಾಲ್ಮೀಕಿ ದಿನವನ್ನು ಆಚರಿಸಬೇಕು. ಆದರೆ ಸಾಧ್ಯವಾಗುತ್ತಿಲ್ಲ ಏಕೆ? ಸಾಮರಸ್ಯ ಸಾಧ್ಯವಾದ ದಿನ ಇದೆಲ್ಲವೂ ಸಾಧ್ಯ ಎಂದು ಅವರು ಹೇಳಿದ್ದಾರೆ. ಭಾಗವತ್‌ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಆರ್‌ಎಸ್‌ಎಸ್‌ ಬೆಂಬಲಿಸುವ ಬಿಜೆಪಿ ನೇತೃತ್ವದ ಸರ್ಕಾರವೇ ಅವರ ಹೇಳಿಕೆ ವಿರುದ್ಧವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

2014ರ ನಂತರ ಸಮಾಜವನ್ನು ವಿಭಜಿಸಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ. ಬುಲ್ಡೋಜರ್‌ ಬಳಸಿ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಇಂಥಹ ಬೆಳವಣಿಗೆಗಳು ನಡೆಯುವಾಗ ಆರ್‌ಎಸ್‌ಎಸ್‌ ಏಕೆ ಧ್ವನಿ ಎತ್ತುವುದಿಲ್ಲ ಎಂದು ಪ್ರಶ್ನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.