ನವದೆಹಲಿ: ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯನ್ನು ಭಾರತ ಪಾಕಿಸ್ತಾನ ನಡುವಿನ ಸ್ಪರ್ಧೆ ಎಂದಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ವಿವಾದಾತ್ಮಕ ಟ್ವೀಟ್ ಕುರಿತು ದೆಹಲಿ ಮುಖ್ಯ ಚುನಾವಣಾಧಿಕಾರಿಗಳಿಂದ ಚುನಾವಣೆ ಆಯೋಗ ವರದಿ ಕೇಳಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾ, ‘ಫೆಬ್ರವರಿ 8ರಂದು ದೆಹಲಿಯ ರಸ್ತೆಗಳಲ್ಲಿ ಭಾರತ–ಪಾಕಿಸ್ತಾನ ನಡುವೆ ಸ್ಪರ್ಧೆ ನಡೆಯಲಿದೆ. ಈಗಾಗಲೇ ಪಾಕಿಸ್ತಾನ ಶಹೀನ್ ಬಾಗ್ ಪ್ರವೇಶಿಸಿದ್ದು, ದೆಹಲಿಯಲ್ಲಿ ಪಾಕಿಸ್ತಾನದ ಸಣ್ಣ ಪ್ರಾಂತ್ಯಗಳನ್ನು ರಚಿಸಲಾಗುತ್ತಿದೆ’ ಎಂದು ಹೇಳಿದ್ದರು.
ಹೀಗಾಗಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಜಿಲ್ಲಾ ಚುನಾವಣಾ ಕಚೇರಿ ಕಪಿಲ್ ಮಿಶ್ರಾ ಅವರಿಗೆ ನೋಟಿಸ್ ನೀಡಿದೆ. ಅವರ ಪ್ರಚೋದನಾಕಾರಿ ಟ್ವೀಟ್‌ಗಾಗಿ ಶೋ-ಕಾಸ್ ನೋಟಿಸ್ ನೀಡಲಾಗಿದ್ದು, ಒಂದು ವೇಳೆ ಅವರು ನೋಟಿಸ್‌ಗೆ ಬದ್ಧರಾಗಿರಲು ವಿಫಲವಾದರೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚುನಾವಣೆ ಆಯೋಗವು ಅವರ ವಿರುದ್ಧ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.
ಕಪಿಲ್ ಮಿಶ್ರಾ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಪಕ್ಷಗಳು ಸೇರಿದಂತೆ ಅವರು ಈ ಹಿಂದೆ ಇದ್ದ ಎಎಪಿಯು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯ ಶಹೀನ್ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಫೆಬ್ರವರಿ 8ರಂದು ನಡೆಯಲಿರುವ ಚುನಾವಣೆಯು ದೆಹಲಿ ರಸ್ತೆಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆಯಾಗಲಿದೆ ಎಂದು ಹೇಳಿದ್ದರು.
ಮತ್ತೊಂದು ಟ್ವೀಟ್‌ನಲ್ಲಿ ಈಗಾಗಲೇ ಪಾಕಿಸ್ತಾನ ಶಹೀನ್ ಬಾಗ್ ಪ್ರವೇಶಿಸಿದ್ದು, ದೆಹಲಿಯಲ್ಲಿ ಹಲವು ಸಣ್ಣ ಪಾಕಿಸ್ತಾನಗಳನ್ನು ರಚಿಸಲಾಗುತ್ತಿದೆ. ಭಾರತದ ಕಾನೂನುಗಳನ್ನು ಶಹೀನ್ ಬಾಗ್, ಚಾಂದ್‌ಬಾಗ್‌ನಲ್ಲಿ ಪಾಲಿಸಲಾಗುತ್ತಿಲ್ಲ ಎಂದು ಹೇಳಿದ್ದರು.
ಎಎಪಿ ಸರ್ಕಾರದಲ್ಲಿ ಸಚಿವರಾಗಿದ್ದ ಅವರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದರು. ಸದ್ಯ ಮಾಡೆಲ್ ಟೌನ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.