ನವದೆಹಲಿ: ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ 14 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ನವೆಂಬರ್ 20ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ತಿಳಿಸಿದೆ.
ನವೆಂಬರ್ 13ರಂದು ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಿಗದಿಯಾಗಿತ್ತು.
ವಿವಿಧ ಹಬ್ಬಗಳ ದೃಷ್ಟಿಯಿಂದ ಉಪ ಚುನಾವಣೆಯನ್ನು ಮರುನಿಗದಿಪಡಿಸುವಂತೆ ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಆಯೋಗಕ್ಕೆ ಮನವಿ ಮಾಡಿದ್ದು, ಮತದಾನದ ಮೇಲೆ ಪರಿಣಾಮಬೀರುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದವು.
ಅದರಂತೆ ಕೇರಳದ ಪಾಲಕ್ಕಾಡ್, ಪಂಜಾಬ್‌ನ ಡೇರಾ ಬಾಬಾ ನಾನಕ್, ಚಬ್ಬರ್ವಾಲ್, ಗಿಡ್ಡಾರ್ಬಾಹ ಮತ್ತು ಬರ್ನಾಲ, ಉತ್ತರ ಪ್ರದೇಶದ ಮೀರಾಪುರ, ಕುಂದರ್ಕಿ, ಗಾಜಿಯಾಬಾದ್, ಖೈರ್, ಕರ್ಹಾಲ್, ಸಿಸಮೌ, ಫುಲ್ಪುರ್, ಕತೇಹಾರಿ, ಮತ್ತು ಮಜವಾನ್ ಕ್ಷೇತ್ರಗಳ ಉಪ ಚುನಾವಣೆಯ ಮತದಾನದ ದಿನಾಂಕ ಮರುನಿಗದಿಯಾಗಿದೆ.
ಉಪ ಚುನಾವಣೆ ನಡೆಯಲಿರುವ ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 13ರಿಂದ 15ರ ವರೆಗೆ ‘ಕಲ್ಪಾತಿ ರಸ್ತೋಲಸವಂ’ ಉತ್ಸವ ನಡೆಯಲಿದೆ. ಪಂಜಾಬ್‌ನಲ್ಲಿ ಶ್ರೀ ಗುರುನಾನಕ್ ದೇವ್ ಅವರ 555ನೇ ‘ಪ್ರಕಾಶ್ ಪರ್ವ್’ ಅನ್ನು ನವೆಂಬರ್ 15ರಿಂದ ಆಚರಿಸಲಾಗುತ್ತಿದ್ದು, ನವೆಂಬರ್ 13ರಿಂದ ‘ಅಖಂಡ ಪಥ’ವನ್ನು ಆಯೋಜಿಸಲಾಗಿದೆ.
ನವೆಂಬರ್ 15ರಿಂದ ಉತ್ತರ ಪ್ರದೇಶದಲ್ಲಿ ಕಾರ್ತಿಕ ಪೂರ್ಣಿಮೆ ಆಚರಿಸಲಾಗುತ್ತಿದ್ದು, ಮೂರ್ನಾಲ್ಕು ದಿನಗಳ ಹಿಂದೆಯೇ ಜನರು ಪ್ರಯಾಣ ಆರಂಭಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.