ನವದೆಹಲಿ: ದೂರದರ್ಶನ ಮತ್ತು ಆಕಾಶವಾಣಿ ಮೂಲಕ ರಾಜಕೀಯ ಪಕ್ಷಗಳು ಪ್ರಚಾರ ಕೈಗೊಳ್ಳಲು ಸಮಯವನ್ನು ಇನ್ನು ಮುಂದೆ ಆನ್‌ಲೈನ್ ಮೂಲಕವೇ ನಿಗದಿಪಡಿಸಲಾಗುವುದು ಎಂದು ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.
ಸಮಯ ನಿಗದಿಪಡಿಸಿ ರಾಜಕೀಯ ಪಕ್ಷಗಳಿಗೆ ‘ಡಿಜಿಟಲ್ ಏರ್ ಟೈಮ್ ವೋಚರ್’ ವಿತರಿಸಲು ಆಯೋಗವು ನಿಯಮಗಳಿಗೆ ತಿದ್ದುಪಡಿ ತಂದಿದೆ. ಅಂದರೆ, ಇನ್ನು ಮುಂದೆ ಪಕ್ಷಗಳ ಪ್ರತಿನಿಧಿಗಳು ಇಂತಹ ವೋಚರ್ ಪಡೆಯಲು ಆಯೋಗದ ಕಚೇರಿಗೆ ತೆರಳುವ ಅಗತ್ಯವಿಲ್ಲ.
ಸರ್ಕಾರಿ ಪ್ರಸಾರ ಮಾಧ್ಯಮಗಳ ಮೂಲಕ ಪ್ರಚಾರಕ್ಕಾಗಿ ಪಕ್ಷಗಳಿಗೆ ಉಚಿತವಾಗಿ ಸಮಯ ನಿಗದಿಪಡಿಸುವ ಯೋಜನೆ 1998ರ ಜನವರಿಯಲ್ಲಿ ಜಾರಿಗೆ ಬಂದಿತ್ತು. ಚುನಾವಣೆ ವೇಳೆ ಸರ್ಕಾರಿ ಮಾಧ್ಯಮವು ಎಲ್ಲ ಪಕ್ಷಗಳಿಗೆ ಸಮಾನವಾಗಿ ಲಭ್ಯವಿರಬೇಕು ಎಂಬುದು ಇದರ ಆಶಯ.
ಈ ಯೋಜನೆಯ ಪ್ರಕಾರ ಮಾನ್ಯತೆ ಪಡೆದಿರುವ ರಾಷ್ಟ್ರೀಯ ಪಕ್ಷಗಳು ಹಾಗೂ ರಾಜ್ಯಗಳ ಮಾನ್ಯತೆ ಪಡೆಯದ ಪಕ್ಷಗಳಿಗೆ ಸಮಾನವಾಗಿ ಸಮಯ ನಿಗದಿಪಡಿಸಲಾಗುತ್ತದೆ. ಹಿಂದಿನ ಚುನಾವಣೆಯಲ್ಲಿನ ಸಾಧನೆ ಆಧರಿಸಿ ಹೆಚ್ಚುವರಿ ಸಮಯ ಹಂಚಿಕೆಯಾಗಲಿದೆ.
ಪಕ್ಷಗಳು ಪ್ರಚಾರ ಮಾಡುವ ನಿರ್ದಿಷ್ಟ ಸಮಯ, ದಿನಾಂಕವನ್ನು ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಡ್ರಾ ಮೂಲಕ ನಿಗದಿಪಡಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.