ನವದೆಹಲಿ: ಮತದಾರರಿಗೆ ಇನ್ನು ಮುಂದೆ ಡಿಜಿಟಲ್ ರೂಪದಲ್ಲಿ ಭಾವಚಿತ್ರವುಳ್ಳ ಚುನಾವಣಾ ಗುರುತಿನ ಚೀಟಿ ನೀಡಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
‘ಡಿಜಿಟಲ್ ಗುರುತಿನ ಚೀಟಿ ಬಗ್ಗೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಲಹೆಗಳು ಬಂದಿವೆ. ಇದನ್ನು ಯಾವ ರೀತಿ ಜಾರಿಗೊಳಿಸುವ ಎನ್ನುವ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ’ ಎಂದು ತಿಳಿಸಿದ್ದಾರೆ.
‘ಡಿಜಿಟಲ್ ಗುರುತಿನ ಚೀಟಿ ಮೊಬೈಲ್, ವೆಬ್‌ಸೈಟ್, ಇ–ಮೇಲ್‌ನಲ್ಲಿ ದೊರೆಯಬಹುದು. ಸುಲಭವಾಗಿ ಮತ್ತು ತ್ವರಿತವಾಗಿ ಗುರುತಿನ ಚೀಟಿ ಲಭ್ಯವಾಗಬೇಕು ಎನ್ನುವುದು ಆಯೋಗದ ಪ್ರಮುಖ ಉದ್ದೇಶ. ಡಿಜಿಟಲ್ ರೂಪದಲ್ಲಿ ಮತದಾರರ ಭಾವಚಿತ್ರವೂ ಸ್ಪಷ್ಟವಾಗಿರುತ್ತದೆ. ಇದರಿಂದ ಮತದಾರರನ್ನು ಸುಲಭವಾಗಿ ಗುರುತಿಸಬಹುದು’ ಎಂದು ತಿಳಿಸಿದ್ದಾರೆ.
‘ತಂತ್ರಜ್ಞಾನವು ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಾಗಿದೆ. ಹೀಗಾಗಿ, ಗುರುತಿನ ಚೀಟಿಯೂ ಸುರಕ್ಷಿತವಾಗಿರಬೇಕು ಎನ್ನುವ ಬಗ್ಗೆ ಹಲವು ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
1993ರಲ್ಲಿ ಮೊದಲ ಬಾರಿ ಆಯೋಗವು ಗುರುತಿನ ಚೀಟಿ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.