ಸಿಲಿಗುರಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಚ್ ಬೆಹಾರ್‌ನಲ್ಲಿ ನಡೆದ ಗುಂಡಿನ ದಾಳಿಯನ್ನು ‘ನರಮೇಧ’ ಎಂದು ಕರೆದಿದ್ದಾರೆ.
ಅಲ್ಲದೆ ‘ಚುನಾವಣಾ ಆಯೋಗವು ಸತ್ಯಾಂಶಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ರಾಜಕೀಯ ನಾಯಕರುಗಳಿಗೆ 72 ಗಂಟೆಗಳ ಕಾಲ ಜಿಲ್ಲೆಯೊಳಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ’ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,‘ ಸೀತಾಲಕುಚಿ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ ವೇಳೆ ಕೇಂದ್ರ ಪಡೆ, ಸಂತ್ರಸ್ತರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ’ ಎಂದು ದೂರಿದ್ದಾರೆ.
‘ಸೀತಾಲಕುಚಿಯಲ್ಲಿ ನರಮೇಧ ನಡೆದಿದೆ. ಏಪ್ರಿಲ್ 14ರೊಳಗೆ ಸೀತಾಲಕುಚಿಗೆ ಭೇಟಿ ನೀಡಲು ಬಯಸುತ್ತೇನೆ. ಆದರೆ ಕೂಚ್ ಬೆಹಾರ್‌ನಲ್ಲಿ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಚುನಾವಣಾ ಆಯೋಗವು ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಮತ್ತು ಗೃಹ ಸಚಿವರು ಅಸಮರ್ಥರು’ ಎಂದು ಅವರು ಟೀಕಿಸಿದರು.
‘ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿಲ್ಲ. ಮೊದಲ ಹಂತದ ಮತದಾನದ ದಿನದಿಂದಲೂ ಕೇಂದ್ರ ಪಡೆಯು ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ. ಆದರೆ ಯಾರೂ ನನ್ನ ಮಾತನ್ನು ಕೇಳಲಿಲ್ಲ’ ಎಂದು ಅವರು ಹೇಳಿದರು.
‘ಸೀತಾಲಕುಚಿ ಕ್ಷೇತ್ರದ ಮತಗಟ್ಟೆಯಲ್ಲಿ ಶನಿವಾರ ಸಿಐಎಸ್‌ಎಫ್ ಸಿಬ್ಬಂದಿಯ ರೈಫಲ್ ಅನ್ನು ಕಿತ್ತುಕೊಳ್ಳಲುಸ್ಥಳೀಯರು ಪ್ರಯತ್ನಿಸಿದರು. ಈ ವೇಳೆ ಸಿಬ್ಬಂದಿ ಸ್ವರಕ್ಷಣೆಗಾಗಿ ನಡೆಸಿದ ಗೋಲಿಬಾರ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.