ಇಟಾನಗರ: ಏಪ್ರಿಲ್ 19ರಂದು ಅರುಣಾಚಲ ಪ್ರದೇಶದಲ್ಲಿ ಏಕಕಾಲಕ್ಕೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ನಡೆದ ಮತದಾನದ ಸಂದರ್ಭ ಎವಿಎಂಗೆ ಹಾನಿ ಮತ್ತು ಹಿಂಸಾಚಾರ ವರದಿಯಾಗಿದ್ದ 8 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ.
ಈ 8 ಮತಗಟ್ಟೆಗಳಲ್ಲಿ ನಡೆದಿರುವ ಮತದಾನವನ್ನು ಅನೂರ್ಜಿತಗೊಳಿಸಿರುವ ಮುಖ್ಯ ಚುನಾವಣಾ ಅಧಿಕಾರಿಯು, ಏಪ್ರಿಲ್ 26ರಂದು ಬೆಳಿಗ್ಗೆ 6ರಿಂದ 2 ಗಂಟೆವರೆಗೆ ಮರುಮತದಾನಕ್ಕೆ ಆದೇಶಿಸಿದ್ದಾರೆ ಎಂದು ಉಪ ಮುಖ್ಯ ಚುನಾವಣಾ ಅಧಿಕಾರಿ ಲಿಕೆನ್ ಕೊಯು ತಿಳಿಸಿದ್ದಾರೆ.
ಪೂರ್ವ ಕಮೆಂಗ್ ಜಿಲ್ಲೆಯ ಬಮೆಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಿಯೋ, ಕುರುಂಗ್ ಕುಮೆಯ ನ್ಯಾಪಿನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಾಂಗ್ಟೆ ಲೋಥ್, ಡಿಂಗ್ಸರ್, ಬೋಗಿಯಾ ಸಿಯುಮ್, ಜಿಂಬಾರಿ ಮತ್ತು ಮೇಲ್ ಸುಬಾನ್ಸಿರಿ ಜಿಲ್ಲೆಯ ನಾಚೋ ಕ್ಷೇತ್ರ ವ್ಯಾಪ್ತಿಯಲ್ಲಿರುವ ಲೆಂಗಿ ಮತಗಟ್ಟೆ, ಸಿಯಾಂಗ್ ಜಿಲ್ಲೆಯ ರುಮ್‌ಗಾಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಗ್ನೆ ಮತ್ತು ಮೊಲೊಮ್ ಮತಗಟ್ಟೆಗಳಲ್ಲಿಯೂ ಮರು ಮತದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯದ 60 ಸದಸ್ಯ ಬಲದ ವಿಧಾನಸಭೆಗೆ 50 ಶಾಸಕರನ್ನು ಆಯ್ಕೆ ಮಾಡಲು ಒಟ್ಟು 8,92,694 ಮತದಾರರಲ್ಲಿ ಅಂದಾಜು ಶೇ 76.44 ರಷ್ಟು ಮತದಾರರು ಏಪ್ರಿಲ್ 19ರಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಈಗಾಗಲೇ 10 ವಿಧಾನಸಭಾ ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.