ನವದೆಹಲಿ: ಕೆ.ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಅನುಷ್ಠಾನದ ನಿಟ್ಟಿನಲ್ಲಿ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳನ್ನು ತ್ವರಿತವಾಗಿ ಗುರುತಿಸುವಂತೆ ಸಂಸದೀಯ ನಿಯೋಗವು ಸಂಬಂಧಿಸಿದ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಕೇರಳ ಮತ್ತು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಪ್ರವಾಹದಿಂದ ಎದುರಾದ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಮಗ್ರ ಚಿಂತನೆ ನಡೆಸಿರುವ ಕೇಂದ್ರ ಸರ್ಕಾರದ ಆಶ್ವಾಸನೆಗಳ ಸಂಸದೀಯ ಸಮಿತಿಯು, ಪಶ್ಚಿಮ ಘಟ್ಟದಲ್ಲಿನ ಅಮೂಲ್ಯ ಅರಣ್ಯ ಪ್ರದೇಶಗಳನ್ನು ಒಳಗೊಂಡ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಬೇಕು ಎಂದು ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಹೇಳಿದೆ.
‘ಪಶ್ಚಿಮ ಘಟ್ಟ ರಕ್ಷಣೆಗಾಗಿ ಆಯಾ ರಾಜ್ಯ ಸರ್ಕಾರಗಳು ಸಮಾಲೋಚನೆ ನಡೆಸುವ ಅಗತ್ಯವಿದೆ. ಅಲ್ಲದೆ, ಸ್ಥಳೀಯರು ಸಹಕಾರ ನೀಡಿದರೆ ಮಾತ್ರ ಕಸ್ತೂರಿರಂಗನ್ ಸಮಿತಿಯ ವರದಿಯ ಪರಿಣಾಮಕಾರಿ ಅನುಷ್ಠಾನ ಸಾಧ್ಯ’ ಎಂದು ಸಂಸತ್‌ಗೆ ಮಂಡಿಸಿರುವ ವರದಿಯಲ್ಲಿ ಸಮಿತಿ ಅಭಿಪ್ರಾಯಪಟ್ಟಿದೆ.
‘ಸ್ಥಳೀಯರ ತೀವ್ರ ವಿರೋಧದ ಕಾರಣ ಕಸ್ತೂರಿರಂಗನ್ ಸಮಿತಿ ಶಿಫಾರಸುಗಳ ಅನುಷ್ಠಾನ ಕಷ್ಟಸಾಧ್ಯ’ ಎಂದು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ತಿಳಿಸಿದೆ. ಅನುಷ್ಠಾನಕ್ಕೆ ಮೊದಲು ಸ್ಥಳೀಯರ ಅಹವಾಲುಗಳನ್ನು ಆಲಿಸುವ ನಿಟ್ಟಿನಲ್ಲಿ ನಿಯೋಗವೊಂದನ್ನು ರಚಿಸಬೇಕು ಎಂದೂ ರಾಜ್ಯಸಭೆ ಸದಸ್ಯ ಸತೀಶಚಂದ್ರ ಮಿಶ್ರಾ ನೇತೃತ್ವದ ಈ ಸಮಿತಿಯು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ಕಾಯ್ದೆ ಹಾಗೂ ಪರಿಸರ ಸಂರಕ್ಷಣಾ ಕಾಯ್ದೆಗಳ ಜಾರಿ ಮತ್ತು ನಿರ್ಬಂಧ ಮತ್ತು ನಿಬಂಧನೆಗಳಿಂದಾಗಿ ಪಶ್ಚಿಮ ಘಟ್ಟದಲ್ಲಿನ ಸೂಕ್ಷ್ಮ ಪರಿಸರ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದೂ ಕರ್ನಾಟಕ ಸರ್ಕಾರ ಸಮಿತಿ ಎದುರು ಸಂಕಷ್ಟ ತೋಡಿಕೊಂಡಿತ್ತು.
ಸೂಕ್ಷ್ಮ ಪರಿಸರ ಪ್ರದೇಶಗಳನ್ನು ರಕ್ಷಿತ ಅರಣ್ಯ ಪ್ರದೇಶಗಳನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಲೂ ಕ್ರಮ ಕೈಗೊಳ್ಳಲಾಗಿದೆ. ಇಂಥ ಪ್ರದೇಶಗಳನ್ನು ರಾಷ್ಟ್ರೀಯ ಉದ್ಯಾನ ಹಾಗು ಅಭಯಾರಣ್ಯಗಳೆಂದು ಘೋಷಿಸಲಾಗಿದೆ ಎಂದು ಕರ್ನಾಟಕ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.