ADVERTISEMENT

ದ್ವೇಷ ಬಿಡಿ, ಆರ್ಥಿಕತೆಯತ್ತ ದೃಷ್ಟಿ ನೆಡಿ: ಮನಮೋಹನ್‌ ಸಿಂಗ್‌ ಸಲಹೆ

ಅರ್ಥ ವ್ಯವಸ್ಥೆ ಸುಧಾರಿಸಿ: ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಕಿವಿಮಾತು

ಪಿಟಿಐ
Published 2 ಸೆಪ್ಟೆಂಬರ್ 2019, 5:12 IST
Last Updated 2 ಸೆಪ್ಟೆಂಬರ್ 2019, 5:12 IST
   

ನವದೆಹಲಿ: ಅರ್ಥ ವ್ಯವಸ್ಥೆಯ ಸ್ಥಿತಿ ‘ಭಾರಿ ಕಳವಳ’ಕಾರಿಯಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

‘ದ್ವೇಷ ಸಾಧಿಸುವ ರಾಜಕಾರಣ’ವನ್ನು ಬದಿಗಿಟ್ಟು ಆರ್ಥಿಕತೆಯನ್ನು ಸರಿಪಡಿಸುವತ್ತ ಗಮನ ಹರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಅವರು ಸಲಹೆ ಕೊಟ್ಟಿದ್ದಾರೆ. ‘ಮಾನವ ನಿರ್ಮಿತ ಬಿಕ್ಕಟ್ಟಿನಿಂದ’ ಆರ್ಥಿಕತೆಯನ್ನು ಸರಿದಾರಿಗೆ ತರಲು ಆರೋಗ್ಯಕರವಾಗಿ ಚಿಂತಿಸುವವರ ಸಲಹೆ ಪಡೆದುಕೊಳ್ಳಿ ಎಂದೂ ಅವರು ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲ ವಿಚಾರಗಳನ್ನೂ ಅತ್ಯಂತ ಕೆಟ್ಟದಾಗಿ ನಿರ್ವಹಣೆ ಮಾಡಿರು
ವುದು ಈಗಿನ ಆರ್ಥಿಕ ಕುಸಿತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

‘ಅರ್ಥ ವ್ಯವಸ್ಥೆಯ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಪ್ರಗತಿಯು ಶೇ 5ಕ್ಕೆ ಇಳಿದಿರುವುದು ನಾವು ಸುದೀರ್ಘ ಹಿಂಜರಿತದ ನಡುವಲ್ಲಿದ್ದೇವೆ ಎಂಬುದರ ಸಂಕೇತ. ಹೆಚ್ಚಿನ ಪ್ರಮಾಣದ ಪ್ರಗತಿಯ ಸಾಮರ್ಥ್ಯ ಭಾರತಕ್ಕೆ ಇದೆ. ಆದರೆ, ಮೋದಿ ನೇತೃತ್ವದ ಸರ್ಕಾರವು ಎಲ್ಲ ವಿಚಾರಗಳಲ್ಲಿಯೂ ಕೆಟ್ಟ ನಿರ್ವಹಣೆ ಮಾಡಿವುದು ಈಗಿನ ಹಿಂಜರಿತಕ್ಕೆ ಕಾರಣ’ ಎಂದು ಅವರು ಹೇಳಿದ್ದಾರೆ.

ಭಾರತದ ಯುವ ಜನರು, ರೈತರು, ಕೃಷಿ ಕಾರ್ಮಿಕರು, ಉದ್ಯಮಿಗಳು ಮತ್ತು ಹಿಂದುಳಿದ ವರ್ಗಗಳಿಗೆ ಇನ್ನೂ ಉತ್ತಮ ವ್ಯವಸ್ಥೆ ಬೇಕಿದೆ. ಈಗಿನ ಸ್ಥಿತಿಯಲ್ಲಿ ಮುಂದುವರಿದರೆ ಉಂಟಾಗುವ ನಷ್ಟ ಭಾರತ ಭರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ತಯಾರಿಕಾ ವಲಯದ ಪ್ರಗತಿಯು ಶೇ 0.6ರಲ್ಲಿ ತಿಣುಕಾಡುತ್ತಿದೆ ಎಂಬುದು ಹೆಚ್ಚು ಚಿಂತೆಯ ವಿಚಾರ. ನೋಟು ರದ್ದತಿ ಮತ್ತು ಜಿಎಸ್‌ಟಿಯ ತರಾತುರಿ ಜಾರಿಯಂತಹ ಮಾನವನಿರ್ಮಿತ ಪ್ರಮಾದಗಳಿಂದ ಅರ್ಥ ವ್ಯವಸ್ಥೆಯು ಚೇತರಿಸಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಭಾರತದ ಸ್ವಾಯತ್ತ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದೆ ಎಂದೂ ಅವರು ಆಪಾದಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ (ಆರ್‌ಬಿಐ) ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ₹1.76 ಲಕ್ಷ ಕೋಟಿ ವರ್ಗಾವಣೆ ಆಗಿರುವುದನ್ನೂ ಅವರು ಪ್ರಸ್ತಾಪಿಸಿದ್ದಾರೆ. ದಾಖಲೆ ಮೊತ್ತವನ್ನು ಸರ್ಕಾರಕ್ಕೆ ನೀಡಿರುವುದು ಆರ್‌ಬಿಐನ ಚೇತರಿಸಿಕೊಳ್ಳುವಿಕೆ ಸಾಮರ್ಥ್ಯಕ್ಕೆ ಪರೀಕ್ಷೆಯಾಗಿದೆ ಎಂದಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ಪಡೆದುಕೊಂಡ ಸರ್ಕಾರಕ್ಕೆ ಈ ಮೊತ್ತವನ್ನು ಏನು ಮಾಡಬೇಕು ಎಂದೇ ತಿಳಿದಿಲ್ಲ ಎಂದೂ ಕುಹಕವಾಡಿದ್ದಾರೆ.

ಸುಗಮ ತೆರಿಗೆ ವ್ಯವಸ್ಥೆ ಮರೀಚಿಕೆಯಾಗಿದೆ. ಸಣ್ಣ ಮತ್ತು ದೊಡ್ಡ ಉದ್ಯಮಿಗಳೆಲ್ಲ ತೆರಿಗೆ ಭಯೋತ್ಪಾದನೆಯಿಂದ ತತ್ತರಿಸಿದ್ದಾರೆ. ಹೂಡಿಕೆದಾರರು ವಿಷಣ್ಣರಾಗಿದ್ದಾರೆ. ಆರ್ಥಿಕ ಚೇತರಿಕೆಗೆ ಇದು ಅಡಿಪಾಯವಾಗುವುದು ಸಾಧ್ಯವಿಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞರೂ ಆಗಿರುವ ಸಿಂಗ್‌ ಹೇಳಿದ್ದಾರೆ.

ಹಣದುಬ್ಬರ ಕುಸಿದಿದೆ ಎಂದು ತೋರಿಸಲು ಸರ್ಕಾರ ಯತ್ನಿಸುತ್ತಿದೆ. ಆದರೆ, ಹೀಗೆ ತೋರಿಸುವುದಕ್ಕಾಗಿ ರೈತರ ಆದಾಯವನ್ನು ಪಾತಾಳಕ್ಕೆ ಇಳಿಸಲಾಗಿದೆ. ಇದು ದೇಶದ ಶೇ 50ರಷ್ಟು ಜನರನ್ನು ಸಂಕಷ್ಟಕ್ಕೆ ತಳ್ಳಿದೆ.ಬಜೆಟ್‌ ಘೋಷಣೆಗಳು ಮತ್ತು ಅವುಗಳನ್ನು ರದ್ದುಪಡಿಸುವ ಕ್ರಮಗಳು ಅಂತರರಾಷ್ಟ್ರೀಯ ಹೂಡಿಕೆದಾರರ ವಿಶ್ವಾಸವನ್ನೇ ಕದಲಿಸಿದೆ. ಜಾಗತಿಕ ರಾಜಕೀಯ ಪಲ್ಲಟಗಳಿಂದಾಗಿ ಜಾಗತಿಕ ವ್ಯಾಪಾರದಲ್ಲಿ ಹೊಸ ಅವಕಾಶಗಳು ತೆರೆದುಕೊಂಡಿವೆ. ಆದರೆ, ಈ ಅವಕಾಶವನ್ನು ಬಳಸಿಕೊಂಡು ರಫ್ತು ಹೆಚ್ಚಿಸಲು ಭಾರತಕ್ಕೆ ಸಾಧ್ಯವಾಗಿಲ್ಲ ಎಂದಿದ್ದಾರೆ.

ತಯಾರಿಕಾ ಕ್ಷೇತ್ರದಲ್ಲಿ ತೀವ್ರ ಕುಸಿತ ಮತ್ತು ಕೃಷಿ ಉತ್ಪಾದನೆ ಇಳಿಕೆಯಿಂದಾಗಿ ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ವೃದ್ಧಿಯು ಶೇ 5ಕ್ಕೆ ಇಳಿದಿದೆ. ಇದು ಐದು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟವಾಗಿದೆ.

***

ಗ್ರಾಮೀಣ ಪ್ರದೇಶದ ಸ್ಥಿತಿ ಶೋಚನೀಯವಾಗಿದೆ. ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಗ್ರಾಮೀಣ ಜನರ ಆದಾಯ ಕುಸಿದಿದೆ
- ಮನಮೋಹನ್‌ ಸಿಂಗ್‌,ಮಾಜಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.