ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಸದಸ್ಯರು ಎನ್ನಲಾದ ಮೂವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಹಣದ ಅಕ್ರಮ ವರ್ಗಾವಣೆ ಆರೋಪದ ಅಡಿಯಲ್ಲಿ ಬಂಧಿಸಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಅಬ್ದುಲ್ ಖಾದರ್ ಪುತ್ತೂರು, ಅನ್ಶದ್ ಬದ್ರುದ್ದೀನ್ ಮತ್ತು ಫಿರೋಜ್ ಕೆ. ಬಂಧಿತರು. ಇವರು ಪಿಎಫ್‌ಐ ಸಂಘಟನೆಯ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ಹೇಳಿವೆ. ಇವರನ್ನು ‘ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ’ಯ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಗೊತ್ತಾಗಿದೆ.
ಬಂಧಿತರನ್ನು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು. ಪಿಎಫ್‌ಐ ಸದಸ್ಯರಿಗೆ ಈ ಮೂವರು ಶಸ್ತ್ರಾಸ್ತ್ರ ಬಳಕೆ ಕುರಿತು ತರಬೇತಿ ನೀಡಿದ್ದಾರೆ, ಇದಕ್ಕಾಗಿ ನಿಷೇಧಿತ ಸಂಘಟನೆಯಿಂದ ಗಣನೀಯ ಪ್ರಮಾಣದಲ್ಲಿ ಹಣ ಪಡೆದಿದ್ದಾರೆ ಎಂದು ಇ.ಡಿ ಆರೋಪಿಸಿದೆ.
ಭಯೋತ್ಪಾದಕ ಕೃತ್ಯಗಳ ಜೊತೆ ನಂಟು ಹೊಂದಿದ್ದ ಆರೋಪದ ಅಡಿ ಕೇಂದ್ರ ಸರ್ಕಾರವು ಪಿಎಫ್ಐ ಸಂಘಟನೆಯನ್ನು 2022ರಲ್ಲಿ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.