ADVERTISEMENT

ಚೀನಾ ನಂಟಿರುವ ಬೆಟ್ಟಿಂಗ್ ಆ್ಯಪ್‌ ಮೂಲಕ ₹400 ಕೋಟಿ ವಂಚನೆ: ನಾಲ್ವರ ಬಂಧನ

ಪಿಟಿಐ
Published 16 ಆಗಸ್ಟ್ 2024, 12:59 IST
Last Updated 16 ಆಗಸ್ಟ್ 2024, 12:59 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ನವದೆಹಲಿ: ಚೀನಾ ನಾಗರಿಕರೊಂದಿಗೆ ನಂಟಿದೆ ಎಂದು ನಂಬಲಾದ ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಆ್ಯಪ್‌ನ ₹400 ಕೋಟಿ ವಂಚನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ತಿಳಿಸಿದೆ.

‘ಫೈವಿನ್’ ಹೆಸರಿನ ಆ್ಯಪ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಅರುಣ್ ಸಾಹು, ಅಲೋಕ್ ಸಾಹು, ಚೇತನ್ ಪ್ರಕಾಶ್ ಮತ್ತು ಜೋಸೆಫ್ ಸ್ಟಾಲಿನ್‌ನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಇ.ಡಿ ತಿಳಿಸಿದೆ.

ADVERTISEMENT

ಆ್ಯಪ್ ಮೂಲಕ ಹಲವಾರು ಆನ್‌ಲೈನ್ ಗೇಮರ್‌ಗಳನ್ನು ವಂಚಿಸಿದ್ದಾರೆ ಎಂದು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೋಲ್ಕತ್ತದ ಕಾಸ್ಸಿಪೋರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಫೈವಿನ್ ಆ್ಯಪ್ ವಂಚನೆಯಿಂದ ಸುಮಾರು ₹400 ಕೋಟಿ ಗಳಿಸಲಾಗಿದೆ. ಈ ಹಣವನ್ನು ಚೀನಾದ ಪ್ರಜೆಗಳ ಹೆಸರಿನಲ್ಲಿ ಎಂಟು ಬಿನಾನ್ಸ್ (ಗ್ಲೋಬಲ್ ಕ್ರಿಪ್ಟೋ ಎಕ್ಸ್‌ಚೇಂಜ್) ವ್ಯಾಲೆಟ್‌ಗಳಿಗೆ ಜಮಾ ಮಾಡಲಾಗಿದೆ. ಈ ವ್ಯಾಲೆಟ್‌ಗಳನ್ನು ಚೀನಾದ ಮುಖ್ಯ ಭೂಭಾಗದಿಂದ ನಿರ್ವಹಿಸಲಾಗಿದೆ ಎಂಬುವುದು ಐಪಿ ಲಾಗ್‌ಗಳಿಂದ ತಿಳಿದುಬಂದಿದೆ.

ಚೀನಾದ ಪ್ರಜೆಗಳು ಈ ನಾಲ್ವರು ಆರೋಪಿಗಳಿಗೆ ಡಿಜಿಟಲ್ ಸಂವಹನದ ಮೂಲಕ ವಿಶೇಷವಾಗಿ ಟೆಲಿಗ್ರಾಂ ಗ್ರೂಪ್‌ ಮೂಲಕ ಸಂವಹನ ನಡೆಸುತ್ತಿದ್ದರು ಮತ್ತು ಅಲ್ಲಿಂದಲೇ ಸೂಚನೆ ನೀಡುತ್ತಿದ್ದರು ಎಂದು ಇ.ಡಿ ಹೇಳಿದೆ.

ಈ ನಾಲ್ವರು ಫೈವಿನ್ ಆ್ಯಪ್ ಸಂಬಂಧಿತ ಹಗರಣದಲ್ಲಿ ಸಕ್ರಿಯ ಪಾತ್ರವಹಿಸಿದ್ದು, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಹಾಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಇ.ಡಿ ತಿಳಿಸಿದೆ.

ಈ ಆರೋಪಿಗಳನ್ನು ಯಾವಾಗ ಬಂಧಿಸಲಾಯಿತು ಎಂಬ ಬಗ್ಗೆ ಇ.ಡಿ ಮಾಹಿತಿ ನೀಡಿಲ್ಲ. ಆದರೆ ಕೋಲ್ಕತ್ತಾದ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಅವರನ್ನು 14 ದಿನಗಳ ಇ.ಡಿ ಕಸ್ಟಡಿಗೆ ನೀಡಿದೆ ಎಂದು ತಿಳಿಸಿದೆ.

ಈ ಭಾರತೀಯ ಪ್ರಜೆಗಳ ಸಹಾಯ ಮತ್ತು ಬೆಂಬಲದೊಂದಿಗೆ ಚೀನಾದ ಪ್ರಜೆಗಳು ಆ್ಯಪ್ ಅನ್ನು ನಿರ್ವಹಿಸುತ್ತಿದ್ದಾರೆ ಎಂದು ಇ.ಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.