ಮುಂಬೈ: ಬೃಹನ್ ಮುಂಬೈನಗರ ಪಾಲಿಕೆಯ (ಬಿಎಂಸಿ) ಕೋವಿಡ್–19 ಚಿಕಿತ್ಸಾ ಕೇಂದ್ರ ಸ್ಥಾಪನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಸುಜಿತ್ ಪಾಟ್ಕರ್ ಹಾಗೂ ಡಾ.ಕಿಶೋರ್ ಬಿಸುರೆ ಎಂಬುವವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.
‘ಪಾಟ್ಕರ್ ಹಾಗೂ ಡಾ.ಬಿಸುರೆ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಪಾಟ್ಕರ್ ಅವರು ಶಿವಸೇನಾ (ಯುಬಿಟಿ) ಸಂಸದ ಸಂಜತ್ ರಾವುತ್ ಅವರ ಸ್ನೇಹಿತ. ಡಾ.ಬಿಸುರೆ ಅವರು ಮುಂಬೈನಲ್ಲಿ ಸ್ಥಾಪಿಸಿದ್ದ ‘ದಹಿಸರ್ ಕೋವಿಡ್–19 ಕೇಂದ್ರ’ದ ಡೀನ್ ಆಗಿದ್ದರು. ಪಾಟ್ಕರ್ ಹಾಗೂ ಅವರ ಮೂವರು ಪಾಲುದಾರರು ಕೋವಿಡ್–19 ಚಿಕಿತ್ಸಾ ಕೇಂದ್ರಗಳ ಸ್ಥಾಪನೆಗಾಗಿ ಪಾಲಿಕೆಯಿಂದ ಅಕ್ರಮವಾಗಿ ಗುತ್ತಿಗೆ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಹಣ ಅಕ್ರಮ ವರ್ಗಾವಣೆ ಸಂಬಂಧಿಸಿ ಇ.ಡಿ ಅಧಿಕಾರಿಗಳು ಮುಂಬೈನ 15 ಸ್ಥಳಗಳಲ್ಲಿ ಕಳೆದ ತಿಂಗಳು ದಾಳಿ ನಡೆಸಿದ್ದರು. ಅಲ್ಲದೇ, ಕೋವಿಡ್–19 ಆಸ್ಪತ್ರೆಗಳ ನಿರ್ವಹಣೆ ಗುತ್ತಿಗೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿ ಐಎಎಸ್ ಅಧಿಕಾರಿ ಸಂಜೀವ್ ಜೈಸ್ವಾಲ್, ಯುವಸೇನಾ (ಯುಬಿಟಿ)ದ ಕೋರ್ ಕಮಿಟಿ ಸದಸ್ಯ ಸೂರಜ್ ಚವಾಣ್ ಅವರಿಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.