ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ದಿನ ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಮಂಗಳವಾರವೂ ಆಲಂ ಅವರನ್ನು ಸುಮಾರು ಒಂಬತ್ತು ತಾಸು ಇ.ಡಿ ವಿಚಾರಣೆಗೆ ಒಳಪಡಿಸಿತ್ತು.
ಕಳೆದ ವಾರ ಆಲಂ ಅವರ ಖಾಸಗಿ ಕಾರ್ಯದರ್ಶಿ ಸಂಜೀವ್ ಲಾಲ್ (52) ಮತ್ತು ಅವರ ಮನೆಗೆಲಸ ಮಾಡುತ್ತಿದ್ದ ಜಹಾಂಗೀರ್ ಆಲಂ (42) ಅವರಿಗೆ ಸಂಬಂಧಿಸಿದ ಪ್ರದೇಶದಲ್ಲಿ ಸುಮಾರು ₹32 ಕೋಟಿ ನಗದು ಪತ್ತೆಯಾಗಿತ್ತು. ನಂತರ ಇಬ್ಬರನ್ನೂ ಇ.ಡಿ ಬಂಧಿಸಿತ್ತು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಮತ್ತು ‘ಲಂಚ’ ಪಡೆಯಲಾಗುತ್ತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿಂತೆ ಇ.ಡಿ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.