ADVERTISEMENT

ಸೂಪರ್‌ಟೆಕ್‌ ಸಂಸ್ಥೆ ಮಾಲೀಕ ಆರ್‌.ಕೆ.ಅರೋರಾ ಬಂಧನ

ಪಿಟಿಐ
Published 27 ಜೂನ್ 2023, 18:55 IST
Last Updated 27 ಜೂನ್ 2023, 18:55 IST
ಆರೋಪಿ ಬಂಧನ –ಸಾಂದರ್ಭಿಕ ಚಿತ್ರ
ಆರೋಪಿ ಬಂಧನ –ಸಾಂದರ್ಭಿಕ ಚಿತ್ರ   

ನವದೆಹಲಿ: ರಿಯಲ್ ಎಸ್ಟೇಟ್‌ ಕಂಪನಿ ಸೂಪರ್‌ಟೆಕ್‌ನ ಅಧ್ಯಕ್ಷ ಮತ್ತು ಮಾಲೀಕ ಆರ್‌.ಕೆ.ಅರೋರಾ ಅವರನ್ನು ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾಗಿದೆ.

ಹಣ ಅಕ್ರಮ ವರ್ಗಾವಣೆ ನಿಯಂತ್ರಣ (ಪಿಎಂಎಲ್‌ಎ) ಕಾಯ್ದೆಯ ಕ್ರಿಮಿನಲ್‌ ಸೆಕ್ಷನ್‌ಗಳ ಅನ್ವಯ ಅವರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿತ್ತು. ಬುಧವಾರ ಅವರನ್ನು ಪಿಎಂಎಲ್‌ಎ ವಿಶೇಷ ಕೋರ್ಟ್‌ ಎದುರು ಹಾಜರುಪಡಿಸುವ ಸಂಭವವಿದೆ.

ಸೂಪರ್‌ಟೆಕ್ ಸಮೂಹದ ನಿರ್ದೇಶಕರು ಮತ್ತು ಪ್ರವರ್ತಕರ ವಿರುದ್ಧ ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಏಪ್ರಿಲ್‌ ತಿಂಗಳಲ್ಲಿ ಜಾರಿ ನಿರ್ದೇಶನಾಲಯವು ಕಂಪನಿ ಮತ್ತು ನಿರ್ದೇಶಕರಿಗೆ ಸೇರಿದ್ದ ₹ 40 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿತ್ತು.

ADVERTISEMENT

ಏಪ್ರಿಲ್‌ ತಿಂಗಳಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದ ಇ.ಡಿ, ‘ರಿಯಲ್‌ ಎಸ್ಟೇಟ್‌ ಯೋಜನೆಗಳಡಿ ಫ್ಲಾಟ್‌ಗಳ ಬುಕ್ಕಿಂಗ್‌ಗೆ ಸಂಬಂಧಿಸಿದಂತೆ ಗ್ರಾಹಕರಿಂದ ಮುಂಗಡವಾಗಿ ಹಣ ಪಡೆದಿದ್ದು, ಬಳಿಕ ಒಪ್ಪಂದದಂತೆ ಫ್ಲಾಟ್‌ಗಳ ಮಾಲೀಕತ್ವ ಹಸ್ತಾಂತರಿಸಲು ವಿಫಲರಾಗಿದ್ದರು. ಹೀಗಾಗಿ, ಕಂಪನಿ ಮತ್ತು ಅದರ ನಿರ್ದೇಶಕರ ವಿರುದ್ಧ ಕ್ರಿಮಿನಲ್‌ ಸಂಚು ಕುರಿತು ಮೊಕದ್ದಮೆ ದಾಖಲಿಸಲಾಗಿತ್ತು ಎಂದು ತಿಳಿಸಿತ್ತು.

ಕಂಪನಿ ಗ್ರಾಹಕರಿಂದ ಹಣ ಸಂಗ್ರಹಿಸಿದ್ದು ತನಿಖೆಯಿಂದ ದೃಢಪಟ್ಟಿತ್ತು. ಅಲ್ಲದೆ, ನಿರ್ದಿಷ್ಟ ಯೋಜನೆಗಳಿಗೆ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದಲೂ ಫ್ಲ್ಯಾಟ್‌ಗಳ ನಿರ್ಮಾಣಕ್ಕಾಗಿ ಹಣ ಸಾಲ ಪಡೆದಿತ್ತು. ಆದರೆ, ಈ ಹಣವನ್ನು ಬಳಿಕ ಸಮೂಹದ ಕಂಪನಿಗಳ ಹೆಸರಿನಲ್ಲಿ ಆಸ್ತಿ ಖರೀದಿಸಲು ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.

ಅಲ್ಲದೆ, ಸೂಪರ್‌ಟೆಕ್‌ ಕಂಪನಿಯು ಸುಮಾರು ₹ 1,500 ಕೋಟಿ ಮೊತ್ತದ, ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಸಾಲ ಮರುಪಾವತಿಸಲು ವಿಫಲವಾಗಿದ್ದು, ಈ ಮೊತ್ತ ಎನ್‌ಪಿಎ ಎಂದು ನಮೂದಾಗಿತ್ತು ಎಂದು ಇ.ಡಿ. ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.