200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಂಚನೆ ಆರೋಪ ಎದುರಿಸುತ್ತಿರುವ ಸುಖೇಶ್ ಚಂದ್ರಶೇಖರ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ನೀಡಿದ್ದ ₹ 7 ಕೋಟಿ ಮೌಲ್ಯದ ಉಡುಗೊರೆಗಳು ಮತ್ತು ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಜಪ್ತಿ ಮಾಡಿದೆ.
ನಟಿಗೆ ನೀಡಿದ್ದ ಈ ಉಡುಗೊರೆಗಳು ಮತ್ತು ಆಸ್ತಿಗಳು ಅಪರಾಧದಿಂದ ಬಂದಿದ್ದ ಆದಾಯ ಎಂದು ಇ.ಡಿ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನಟಿ ನೋರಾ ಫತೇಹಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ವಿಚಾರದಲ್ಲಿ 2021ರ ಡಿಸೆಂಬರ್‌ನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರ ಮುಂದೆ ಇ.ಡಿ ಮೊದಲ ಚಾರ್ಜ್ ಶೀಟ್ ಅನ್ನು ಸಲ್ಲಿಸಿತು.
ಡಿಸೆಂಬರ್ ತಿಂಗಳಿನಲ್ಲಿ ಸುಕೇಶ್ ಚಂದ್ರಶೇಖರ್ ಅವರ ಆಪ್ತ ಪಿಂಕಿ ಇರಾನಿ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ, ಈತನ ವಿರುದ್ಧ ಇ.ಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಇರಾನಿ ಅವರು ಜಾಕ್ವೆಲಿನ್ ಫರ್ನಾಂಡಿಸ್‌ಗೆ ದುಬಾರಿ ಉಡುಗೊರೆಗಳನ್ನು ಆಯ್ಕೆ ಮಾಡುತ್ತಿದ್ದರು ಮತ್ತು ನಂತರ ಸುಕೇಶ್ ಚಂದ್ರಶೇಖರ್ ಹಣ ಪಾವತಿಸಿದ ಬಳಿಕ ಅದನ್ನು ಅವರ ಮನೆಗೆ ತಲುಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಸುಕೇಶ್ ವಿವಿಧ ಮಾಡೆಲ್‌ಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ಸುಮಾರು ₹ 20 ಕೋಟಿಯನ್ನು ಖರ್ಚು ಮಾಡಿದ್ದಾನೆ ಎನ್ನಲಾಗಿದೆ. ಕೆಲವರು ಆತನಿಂದ ಉಡುಗೊರೆ ಪಡೆಯಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.