ADVERTISEMENT

ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 9:51 IST
Last Updated 28 ಅಕ್ಟೋಬರ್ 2024, 9:51 IST
ಇಡಿ ಲೋಗೊ
ಇಡಿ ಲೋಗೊ    

ನವದೆಹಲಿ: ₹4,037 ಕೋಟಿ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಐದು ರಾಜ್ಯಗಳಲ್ಲಿ ₹503.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್, ಆಂಧ್ರ ಪ್ರದೇಶ ಮತ್ತು ಬಿಹಾರದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ದೂರಿನ ಅನ್ವಯ ಕಾರ್ಪೊರೇಟ್ ಪವರ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳು ಸಾಲ ಪಡೆಯಲು ಮತ್ತು ಬ್ಯಾಂಕ್ ಹಣವನ್ನು ಬೇರೆಡೆಗೆ ವರ್ಗಾಯಿಸಲು ನಕಲಿ ವಿವರಗಳನ್ನು ಸಲ್ಲಿಸಿದ್ದಾರೆ. ಇದರಿಂದಾಗಿ ಬಡ್ಡಿ ಸೇರಿದಂತೆ ₹11,379 ಕೋಟಿ ನಷ್ಟವಾಗಿದೆ ಎಂದು ಉಲ್ಲೇಖಿಸಲಾಗಿದೆ.

ADVERTISEMENT

ಕೋಲ್ಕತ್ತದ ಮೂಲದ ಕಾರ್ಪೊರೇಟ್ ಪವರ್ ಲಿಮಿಟೆಡ್ ಕಂಪನಿ ವಿರುದ್ಧ ಹಣದ ಅಕ್ರಮ ವಹಿವಾಟು ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ ಪ್ರಕರಣ ದಾಖಲಿಸಲಾಗಿದ್ದು, ಕಂಪನಿಯ ನಿರ್ದೇಶಕರು ಮತ್ತು ಪ್ರವರ್ತಕರನ್ನು ವಿಚಾರಣೆ ನಡೆಸಲಾಗಿದೆ ಎಂದು ಇಡಿ ತಿಳಿಸಿದೆ.

ಇಡಿ ಅಧಿಕಾರಿಗಳು ನಾಗಪುರ, ಕೋಲ್ಕತ್ತ ಮತ್ತು ವಿಶಾಖಪಟ್ಟಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಇದೇ ಪ್ರಕರಣ ಸಂಬಂಧ ಕಾರ್ಪೊರೇಟ್ ಪವರ್ ಲಿಮಿಟೆಡ್ ವಿರುದ್ಧ ಸಿಬಿಐ ಕೂಡ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.