ADVERTISEMENT

ವಿಶೇಷ ನ್ಯಾಯಾಲಯ ವಿಚಾರಣೆ ಮಾಡುವಾಗ ಆರೋಪಿಯನ್ನು ಇ.ಡಿ ಬಂಧಿಸುವಂತಿಲ್ಲ– SC

ಪಿಟಿಐ
Published 16 ಮೇ 2024, 7:21 IST
Last Updated 16 ಮೇ 2024, 7:21 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ವಿಶೇಷ ನ್ಯಾಯಾಲಯವು ಹಣ ಅಕ್ರಮ ವರ್ಗಾವಣೆಯ ದೂರನ್ನು ಗಮನಕ್ಕೆ ತೆಗೆದುಕೊಂಡ ನಂತರ ಜಾರಿ ನಿರ್ದೇಶನಾಲಯವು (ಇ.ಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 19 ರ ಅಡಿಯಲ್ಲಿ ಆರೋಪಿಯನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ನ್ಯಾಯಾಧೀಶರಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಆರೋಪಿಯು ಸಮನ್ಸ್‌ನ ಅನ್ವಯ ನ್ಯಾಯಾಲಯದ ಮುಂದೆ ಹಾಜರಾದಾಗ, ಆತನನ್ನು ಕಸ್ಟಡಿಗೆ ಪಡೆಯಲು ಇ.ಡಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ.

ಅಲ್ಲದೆ ಸಮನ್ಸ್‌ ಅನುಸಾರ ನ್ಯಾಯಾಲಯದ ಎದುರು ಹಾಜರಾದ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ಅವರಿಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್‌ 45ರ ಅವಳಿ ಷರತ್ತುಗಳು ಅನ್ವಯಿಸುವುದಿಲ್ಲ ಎಂದಿದೆ.

ADVERTISEMENT

ಅವಳಿ ಷರತ್ತುಗಳೆಂದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯವು ಮೊದಲು ಪಬ್ಲಿಕ್ ಪ್ರಾಸಿಕ್ಯೂಟರ್‌ನ ವಿಚಾರಣೆಗೆ ಅವಕಾಶ ನೀಡಬೇಕು. ಎರಡನೆಯದು ಈ ವಿಚಾರಣೆಯಲ್ಲಿ ಆರೋಪಿಯು ತಪ್ಪಿತಸ್ಥನಲ್ಲ, ಬಿಡುಗಡೆಯಾದ ನಂತರ ಅಂತಹ ಅಪರಾಧವನ್ನು ಮಾಡುವ ಸಾಧ್ಯತೆಯಿಲ್ಲ ಎಂದು ಖಚಿತವಾದ ಬಳಿಕ ಜಾಮೀನು ನೀಡಬಹುದು.

ವಿಶೇಷ ನ್ಯಾಯಾಲಯಕ್ಕೆ ಅಪರಾಧದ ಅರಿವು ಇದ್ದರೂ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಜಾಮೀನಿಗಾಗಿ ಅವಳಿ ಕಠಿಣ ಪರೀಕ್ಷೆಯನ್ನು ಎದುರಿಸಬೇಕೇ? ಎಂದು ಜಾಮೀನು ನೀಡುವ ವೇಳೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.