ADVERTISEMENT

ವಿವೋ-ಇಂಡಿಯಾ, ಇತರ ಕಂಪನಿಗಳ ವಿರುದ್ಧ ಇ.ಡಿ. ಚಾರ್ಚ್‌ಶೀಟ್

ಪಿಟಿಐ
Published 7 ಡಿಸೆಂಬರ್ 2023, 14:42 IST
Last Updated 7 ಡಿಸೆಂಬರ್ 2023, 14:42 IST
   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಾದ ವಿವೋ–ಇಂಡಿಯಾ ಮತ್ತು ಇತರ ಕೆಲವು ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಮೊದಲ ಚಾರ್ಚ್‌ಶೀಟ್ ಸಲ್ಲಿಸಿದೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಸಲಾಗಿದೆ. ಈ ಪ್ರಕರಣ ಸಂಬಂಧ ಈಗಾಗಲೇ ಬಂಧಿಸಲಾಗಿರುವ ನಾಲ್ಕು ಮಂದಿಯನ್ನು ಹೊರತುಪಡಿಸಿ ವಿವೊ–ಇಂಡಿಯಾ ವಿರುದ್ಧವೂ ಆರೋಪ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲಾವಾ ಇಂಟರ್‌ನ್ಯಾಷನಲ್‌ ಮೊಬೈಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರೈ, ಚೀನಾ ಪ್ರಜೆ ಗುವಾಂಗ್‌ವೆನ್‌ ಅಲಿಯಾಸ್‌ ಅಂಡ್ರ್ಯೋ ಕುವಾಂಗ್‌, ಚಾರ್ಟೆಡ್‌ ಅಕೌಂಟೆಂಟ್‌ಗಳಾದ ನಿತಿನ್‌ ಗರ್ಗ್‌ ಮತ್ತು ರಂಜನ್‌ ಮಲಿಕ್ ಅವರನ್ನು ಇ.ಡಿ ಈಗಾಗಲೇ ಬಂಧಿಸಿದೆ.

ADVERTISEMENT

ವಿವೊ ಕಂಪನಿಯು ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತನ್ನ ವಹಿವಾಟಿನ ಶೇ 50ರಷ್ಟು ಮೊತ್ತ, ಅಂದರೆ ಸುಮಾರು ₹ 62,476 ಕೋಟಿಯನ್ನು ಚೀನಾಗೆ ರವಾನಿಸಿದೆ ಎಂದು ಇ.ಡಿ ಆರೋಪಿಸಿತ್ತು.

ವಿವೊ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ ಕಂಪನಿಗಳ ಮೇಲೆ ಇ.ಡಿ ಜುಲೈ 5ರಂದು ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.