ನವದೆಹಲಿ: ಪನಾಮಾ ಪೇಪರ್ಸ್ ಸೋರಿಕೆ ಹಗರಣದಲ್ಲಿ ಕಂಡುಬಂದಿದ್ದ ವ್ಯಕ್ತಿಯೊಬ್ಬರ ವಿರುದ್ಧ ಹಣದ ಅಕ್ರಮ ವರ್ಗಾವಣೆ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ತಿಳಿಸಿದೆ.
ವಿದೇಶಗಳಲ್ಲಿ ಅಕ್ರಮವಾಗಿ ಆಸ್ತಿ ಹೊಂದಿರುವ ಆರೋಪದಡಿ ಸಂಜಯ ವಿಜಯ ಶಿಂದೆ, ಪತ್ನಿ ಅಪರ್ಣಾ ಹಾಗೂ ಶಿಂದೆ ಒಡೆತನದ ವೀನಸ್ ಬೇ ಆಫ್‌ಶೋರ್ ಲಿಮಿಟೆಡ್ ಎಂಬ ಕಂಪನಿ ವಿರುದ್ಧ ಭೋಪಾಲ್‌ನ ನ್ಯಾಯಾಲಯದಲ್ಲಿ ಅಕ್ಟೋಬರ್ 18ರಂದು ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಇಬ್ಬರು ಆರೋಪಿಗಳು ಹಾಗೂ ಕಂಪನಿ ವಿರುದ್ಧ ಆದಾಯ ತೆರಿಗೆ ಇಲಾಖೆಯು ದಾಖಲಿಸಿದ್ದ ಆರೋಪಪಟ್ಟಿ ಆಧಾರದಲ್ಲಿ ಹಣದ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಇ.ಡಿ, ತನಿಖೆ ನಡೆಸುತ್ತಿದೆ.
ತೆರಿಗೆ ರಹಿತ ದೇಶವಾದ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್(ಬಿವಿಐ) ವೀನಸ್ ಬೇ ಆಫ್‌ಶೋರ್ ಲಿಮಿಟೆಡ್ ಹೆಸರಿನ ಕಂಪನಿಯನ್ನು ಶಿಂದೆ ಸ್ಥಾಪಿಸಿದ್ದು. ಸಿಂಗಪುರದಲ್ಲಿರುವ ಯುಬಿಎಸ್–ಎಜಿ ಬ್ಯಾಂಕ್‌ನಲ್ಲಿರುವ ಶಿಂದೆ ಖಾತೆಗೆ ₹ 21.87 ಕೋಟಿ ಜಮೆಯಾಗಿತ್ತು’ ಎಂದು ಇ.ಡಿ ಆರೋಪಿಸಿದೆ.
‘ಬಿವಿಐನಲ್ಲಿನ ಕಂಪನಿಯ ಹಣವನ್ನು ಎನ್‌ಆರ್‌ಇ/ಎನ್‌ಆರ್‌ಒ ಖಾತೆಗಳ ಮೂಲಕ ಶಿಂದೆ ಭಾರತಕ್ಕೆ ತಂದಿದ್ದರು. ಈ ಹಣವನ್ನು ಎಫ್‌ಸಿಎನ್‌ಆರ್–ಎಫ್‌ಡಿ (ಫಾರಿನ್ ಕರೆನ್ಸಿ ನಾನ್–ರೆಸಿಡೆಂಟ್–ಎಫ್‌ಡಿ) ಖಾತೆಯಲ್ಲಿ ಹೂಡಿಕೆ ಮಾಡಿದ್ದರು. ನಂತರ ಈ ಹೂಡಿಕೆಗಳನ್ನು ನಗದೀಕರಣಗೊಳಿಸಿದ್ದ ಶಿಂದೆ, ಆ ಹಣವನ್ನು ಹಲವು ಸ್ಥಿರ ಮತ್ತು ಚರಾಸ್ತಿಗಳಲ್ಲಿ ತೊಡಗಿಸಿದ್ದರು’ ಎಂದೂ ಇ.ಡಿ ಆರೋಪಪಟ್ಟಿಯಲ್ಲಿ ಹೇಳಿದೆ.
‘ಆರೋಪಿಯು ಈ ಅಕ್ರಮ ಹಣದಿಂದ ಭೋಪಾಲ್, ಗೋವಾ, ವಡೋದರ ಹಾಗೂ ಮುಂಬೈ ನಗರಗಳಲ್ಲಿ ಸ್ವತ್ತುಗಳನ್ನು ಖರೀದಿ ಮಾಡಿದ್ದರು. ಜೊತೆಗೆ, ಮ್ಯೂಚುವಲ್ ಫಂಡ್‌ಗಳು, ಷೇರುಗಳು, ಎಫ್‌ಡಿ, ಎಲ್‌ಐಸಿ ಪಾಲಿಸಿಗಳಲ್ಲಿಯೂ ಹೂಡಿಕೆ ಮಾಡಿದ್ದರು’ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.
ವಿದೇಶಗಳಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದವರ ವಿವರಗಳನ್ನು ವಾಷಿಂಗ್ಟನ್ ಮೂಲದ ‘ಅಂತರರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ವು (ಐಸಿಐಜೆ) ‘ಪನಾಮಾ ಪೇಪರ್ಸ್’ ಹೆಸರಿನ ಕಡತಗಳ ಮೂಲಕ 2016ರಲ್ಲಿ ಬಯಲು ಮಾಡಿತ್ತು. ವಿಶ್ವ ನಾಯಕರು ಹಾಗೂ ಹಲವಾರು ಸೆಲೆಬ್ರಿಟಿಗಳ ಹೆಸರುಗಳು ಈ ಕಡತಗಳಲ್ಲಿ ಇದ್ದವು.
ಭಾರತಕ್ಕೆ ನಂಟಿರುವ 426 ಪ್ರಕರಣಗಳು ಈ ಕಡತಗಳಲ್ಲಿ ಉಲ್ಲೇಖವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.