ADVERTISEMENT

ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ಹಲವೆಡೆ ಇ.ಡಿ ದಾಳಿ

ಪಿಟಿಐ
Published 14 ನವೆಂಬರ್ 2024, 12:23 IST
Last Updated 14 ನವೆಂಬರ್ 2024, 12:23 IST
<div class="paragraphs"><p>ಇ.ಡಿ</p></div>

ಇ.ಡಿ

   

ಚೆನ್ನೈ: ಚೆನ್ನೈ ಮೂಲದ ‘ಲಾಟರಿ ಕಿಂಗ್’ ಸ್ಯಾಂಟಿಯಾಗೊ ಮಾರ್ಟಿನ್ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಹಲವು ರಾಜ್ಯಗಳಲ್ಲಿ ಶೋಧ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸ್ಯಾಂಟಿಯಾಗೊ ಮಾರ್ಟಿನ್ ಸುಮಾರು ₹1,300 ಕೋಟಿ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಅತಿದೊಡ್ಡ ದಾನಿಯಾಗಿದ್ದಾರೆ.

ADVERTISEMENT

ಮಾರ್ಟಿನ್‌ ಅವರ ಚೆನ್ನೈ ನಿವಾಸದಲ್ಲಿ ವಶಪಡಿಸಿಕೊಂಡಿದ್ದ ಲೆಕ್ಕಪತ್ರವಿಲ್ಲದ ₹7.2 ಕೋಟಿ ಹಣದ ಪ್ರಕರಣ ಸಂಬಂಧ ಮಾರ್ಟಿನ್ ಮತ್ತು ಇತರ ಕೆಲವರ ವಿರುದ್ಧದ ಪ್ರಾಥಮಿಕ ಎಫ್‌ಐಆರ್ ಕೈಬಿಡಲು ಕೆಳ ನ್ಯಾಯಾಲಯವು ಪೊಲೀಸರಿಗೆ ಅನುಮತಿಸಿ, ಆದೇಶ ನೀಡಿತ್ತು. ಈ ಆದೇಶ ರದ್ದುಪಡಿಸಿ ಈ ಪ್ರಕರಣದಲ್ಲಿ ಮಾರ್ಟಿನ್ ಮತ್ತು ಅವರ ಪಾಲುದಾರರ ವಿರುದ್ಧ ತನಿಖೆ ಮುಂದುವರಿಸಲು ಮದ್ರಾಸ್ ಹೈಕೋರ್ಟ್ ಕಳೆದ ತಿಂಗಳು ಇ.ಡಿಗೆ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಮಾರ್ಟಿನ್‌ ಅವರಿಗೆ ಸೇರಿದ ಹಲವು ಸ್ಥಳಗಳಲ್ಲಿ ಇ.ಡಿ ಶೋಧ ನಡೆಸಿದೆ.

ಮಾರ್ಟಿನ್ ಮತ್ತು ಅವರ ಅಳಿಯ ಆಧವ್ ಅರ್ಜುನ್ ಹಾಗೂ ಇವರ ಪಾಲುದಾರರಿಗೆ ಸಂಬಂಧಿಸಿದ ಸುಮಾರು 20 ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಇವರ ವ್ಯವಹಾರಗಳಿರುವ ಚೆನ್ನೈ, ಕೊಯಮತ್ತೂರು, ಹರಿಯಾಣದ ಪರೀದಾಬಾದ್‌, ಪಂಜಾಬ್‌ನ ಲುಧಿಯಾನ ಹಾಗೂ ಕೋಲ್ಕತ್ತದಲ್ಲಿ ಸಮಗ್ರ ಶೋಧ ನಡೆಸಲಾಗುತ್ತಿದೆ ಎಂದು ಇ.ಡಿ ಮೂಲಗಳು ಹೇಳಿವೆ.  

ಲಾಟರಿ ವಂಚನೆ, ಅಕ್ರಮ ಲಾಟರಿ ಮಾರಾಟದ ಸಂಬಂಧ ಮಾರ್ಟಿನ್ ಮತ್ತು ಅವರ ವ್ಯವಹಾರ ಜಾಲದ ವಿರುದ್ಧ ಇ.ಡಿಯು ಪೊಲೀಸ್‌ ಎಫ್‌ಐಆರ್‌ ಆಧರಿಸಿ ಕ್ರಮ ಕೈಗೊಂಡಿದೆ. ಈ ಹಿಂದೆಯೂ ಇ.ಡಿ, ಮಾರ್ಟಿನ್‌ ಅವರ ವ್ಯವಹಾರಗಳಿಗೆ ಸಂಬಂಧಿಸಿದ ಕಡೆಗಳಲ್ಲಿ ಶೋಧ ನಡೆಸಿತ್ತು.

ಇ.ಡಿಯು ಕಳೆದ ವರ್ಷ ಮಾರ್ಟಿನ್ ವಿರುದ್ಧದ ಪ್ರಕರಣದಲ್ಲಿ ₹457 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಕೇರಳದಲ್ಲಿ ರಾಜ್ಯ ಲಾಟರಿ ಮಾರಾಟದ ವಂಚನೆಯಲ್ಲಿ ಸಿಕ್ಕಿಂ ಸರ್ಕಾರಕ್ಕೆ ಸುಮಾರು ₹900 ಕೋಟಿ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸಿಕ್ಕಿಂ ಲಾಟರಿಗಳ ಪ್ರಧಾನ ವಿತರಕ ಆಗಿರುವ ಫ್ಯೂಚರ್ ಗೇಮಿಂಗ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್ ಮತ್ತು ತಮಿಳುನಾಡಿನಲ್ಲಿ ‘ಲಾಟರಿ ಕಿಂಗ್’ ಎಂದೇ ಗುರುತಿಸಿಕೊಂಡಿರುವ ಮಾರ್ಟಿನ್ ವಿರುದ್ಧ 2019ರಿಂದ ಇ.ಡಿ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.