ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಮನೆ ಆಹಾರವನ್ನು ನಿರಾಕರಿಸುವ ಮೂಲಕ ಅವರನ್ನು ಕೊಲ್ಲಲು ದೊಡ್ಡ ಸಂಚು ನಡೆದಿದೆ ಎಂದು ದೆಹಲಿ ಸಚಿವೆ ಆತಿಶಿ ಗುರುವಾರ ಆರೋಪಿಸಿದ್ದಾರೆ.
‘ಟೈಪ್ 2 ಮಧುಮೇಹ ಹೊಂದಿದ್ದರೂ ಕೇಜ್ರಿವಾಲ್ ಅವರು ನಿತ್ಯ ಮಾನಿವಹಣ್ಣು ಮತ್ತು ಸಿಹಿ ತಿಂಡಿಗಳಂತಹ ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುತ್ತಿದ್ದಾರೆ. ಈ ಮೂಲಕ ಅವರು ವೈದ್ಯಕೀಯ ಜಾಮೀನಿಗೆ ಆಧಾರಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಇ.ಡಿ ನ್ಯಾಯಾಲಯಕ್ಕೆ ಹೇಳಿದ ಬೆನ್ನಲ್ಲೇ, ಸಚಿವೆ ಪ್ರತಿಕ್ರಿಯಿಸಿದ್ದಾರೆ.
‘ಕೇಜ್ರಿವಾಲ್ ಅವರು ಸಕ್ಕರೆಯೊಂದಿಗೆ ಚಹಾ ಮತ್ತು ಸಿಹಿ ತಿನಿಸುಗಳನ್ನು ಸೇವಿಸುತ್ತಿದ್ದಾರೆ. ಆಲೂ ಪೂರಿ ತಿನ್ನುತ್ತಿದ್ದಾರೆ ಎಂದು ಇ.ಡಿ ಸುಳ್ಳು ಹೇಳುತ್ತಿದೆ. ಅವರು ನವರಾತ್ರಿ ಮೊದಲ ದಿನವಷ್ಟೇ ಪೂರಿ ತಿಂದಿದ್ದು. ದೆಹಲಿ ಸಿ.ಎಂಗೆ ಮನೆಯ ಆಹಾರ ನಿಲ್ಲಿಸಲು ಇ.ಡಿ ಪ್ರಯತ್ನಿಸುತ್ತಿದೆ’ ಎಂದು ಸಚಿವೆ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಒಂದು ವೇಳೆ ಅವರಿಗೆ ಮನೆಯ ಆಹಾರ ನಿರಾಕರಿಸಿದರೆ, ಜೈಲಿನಲ್ಲಿ ಯಾವ ಆಹಾರ, ಯಾವಾಗ ನೀಡಲಾಗುತ್ತಿದೆ ಎಂಬುದು ತಿಳಿಯುವುದಿಲ್ಲ’ ಎಂದು ಅವರು ಹೇಳಿದರು. ‘ಕೆಲ ದಿನಗಳಿಂದ ಕೇಜ್ರಿವಾಲ್ ಅವರ ಸಕ್ಕರೆಯ ಮಟ್ಟ ಏರುತ್ತಿದೆ. ಅವರಿಗೆ ತಿಹಾರ್ ಜೈಲಿನ ಅಧಿಕಾರಿಗಳು ಇನ್ಸುಲಿನ್ ನಿರಾಕರಿಸಿದ್ದಾರೆ’ ಎಂದು ಅವರು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.