ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕುಟುಂಬಕ್ಕೆ ಅಕ್ರಮ ಕಲ್ಲಿದ್ದಲು ವಹಿವಾಟಿನಿಂದ ಆರ್ಥಿಕ ನೆರವು ಪಡೆದಿದೆ ಎಂದು ಇ.ಡಿ ದೂರಿದೆ.
ರಾಜ್ಯದಲ್ಲಿರುವ ಕೆಲ ಕಲ್ಲಿದ್ದಲು ಗಣಿಗಳು ಆಳವಾದ ರಾಜಕೀಯ ಸಂಬಂಧವನ್ನು ಹೊಂದಿವೆ ಎಂಬ ಅಂಶವನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ಕೋರ್ಟ್‌ಗೆ ಬುಧವಾರ ಸಲ್ಲಿಸಿದ ಟಿಪ್ಪಣಿಯಲ್ಲಿ ದಾಖಲಿಸಿದೆ. ಇದೇ ಸಂದರ್ಭದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ್ ಕುಮಾರ್ ಮಿಶ್ರಾ ಅವರನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದೂ ಕೋರಿದೆ.
ಪೊಲೀಸ್‌ಇನ್‌ಸ್ಪೆಕ್ಟರ್ ಅಲ್ಲದೆ ಟಿಎಂಸಿ ಯುವ ಘಟಕದ ಮುಖಂಡ ವಿನಯ್ ಮಿಶ್ರಾ ಅವರನ್ನು ಸ್ಥಳೀಯ ವರ್ತಕ ಅನುಪ್ ಮಾಜ್ಹಿ ಮುಖ್ಯ ಆರೋಪಿಯಾಗಿರುವ ಪ್ರಕರಣ ಸಂಬಂಧ ಇ.ಡಿ ಈಗಾಗಲೇ ಬಂಧಿಸಿದೆ. ಬಂಧಿತ ಇನ್‌ಸ್ಪೆಕ್ಟರ್ ಅವರನ್ನು ಬುಧವಾರದವರೆಗೂ ಇ.ಡಿ ವಶಕ್ಕೆ ಒಪ್ಪಿಸಿದ ನ್ಯಾಯಾಲಯ ವಿಚಾರಣೆಯನ್ನು ಏಪ್ರಿಲ್ 12ಕ್ಕೆ ಮುಂದೂಡಿತು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಗೆ (ಪಿಎಂಎಲ್‌ಎ) ಸಂಬಂಧಿಸಿ ಪ್ರಕರಣವನ್ನು ಸಿಬಿಐ ನವೆಂಬರ್ 2020ರಲ್ಲಿ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ದಾಖಲಿಸಲಾಗಿದೆ. ರಾಜ್ಯದ ಕುನುಸ್ತೊರಿಯಾ ಮತ್ತು ಕಜೊರಾ ವಲಯದಲ್ಲಿ ನಡೆದಿರುವ ಈಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ಗೆ ಸೇರಿದ ಬಹುಕೋಟಿ ಕಲ್ಲಿದ್ದಲು ಅಕ್ರಮ ಕುರಿತು ಸಿಬಿಐ ಎಫ್‌ಐಆರ್ ದಾಖಲಿಸಿತ್ತು.
ಇ.ಡಿ ಆರೋಪವನ್ನು ಸಂಸದರು ತಳ್ಳಿಹಾಕಿದ್ದಾರೆ. ಕಲ್ಲಿದ್ದಲು ಕುರಿತ ಎಲ್ಲ ವಹಿವಾಟು ನೇರವಾಗಿ ಕೇಂದ್ರದ ಸುಪರ್ದಿಗೆ ಬರಲಿದ್ದು, ಕೇಂದ್ರ ಸಂಸ್ಥೆಗಳ ಉಸ್ತುವಾರಿಯಲ್ಲಿಯೇ ಇದೆ. ಟಿಎಂಸಿ ಮುಖಂಡರು ಅಕ್ರಮ ವಹಿವಾಟಿನಿಂದ ಹಣ ಪಡೆದಿರುವ ಮಾಹಿತಿ ಬಿಜೆಪಿ ಇದ್ದರೆ, ತನಿಖೆ ನಡೆಸಲು ಇರುವ ಅಡ್ಡಿಯಾದರೂ ಏನು ಎಂದು ಕಳೆದ ವಾರ ಟ್ವೀಟ್ ಮಾಡಿದ್ದರು.
‘ಬಿಜೆಪಿ ಪ್ರಕಾರ, ಕಲ್ಲಿದ್ದಲು ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಟಿಎಂಸಿ ಮುಖಂಡರ ಆದೇಶಗಳನ್ನು ಪಾಲಿಸುತ್ತಿದ್ದಾರೆ. ತಮ್ಮ ನಾಯಕರ (ನರೇಂದ್ರ ಮೋದಿ –ಅಮಿತ್ ಶಾ) ಆದೇಶಗಳನ್ನಲ್ಲ. ಇಂಥ ಆರೋಪದ ಮೂಲಕ ಯಾರನ್ನು ಮೂರ್ಖರಾಗಿಸುತ್ತಿದ್ದೀರಿ?‘ ಎಂದು ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.