ADVERTISEMENT

ದೆಹಲಿ ಅಬಕಾರಿ ನೀತಿ: ಆರೋಪಿಗಳಾಗಿ ಕೇಜ್ರಿವಾಲ್‌, ಎಎಪಿ- ಇ.ಡಿಯಿಂದ ಆರೋಪ ಪಟ್ಟಿ

ದೆಹಲಿ ಅಬಕಾರಿ ನೀತಿಯ ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿಯಿಂದ ಆರೋಪ ಪಟ್ಟಿ

ಪಿಟಿಐ
Published 17 ಮೇ 2024, 20:24 IST
Last Updated 17 ಮೇ 2024, 20:24 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ನವದೆಹಲಿ (ಪಿಟಿಐ): ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಆಮ್‌ ಆದ್ಮಿ ಪಕ್ಷವನ್ನು (ಎಎಪಿ) ಆರೋಪಿಗಳಾಗಿ ಹೆಸರಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಶುಕ್ರವಾರ ದೋಷಾರೋಪ ಪಟ್ಟಿಯನ್ನು ದಾಖಲಿಸಿತು. 

ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ಗೆ ಇ.ಡಿ. 200 ಪುಟಗಳ ಹೊಸ ದೋಷಾರೋಪ ಪಟ್ಟಿ ದಾಖಲಿಸಿತು. ಈ ಮೂಲಕ ಇದೇ ಮೊದಲಿಗೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹಾಲಿ ಮುಖ್ಯಮಂತ್ರಿ, ರಾಜಕೀಯ ಪಕ್ಷವೊಂದು
ಆರೋಪಿಗಳಾದಂತಾಗಿದೆ.

ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ಕೋರ್ಟ್‌ನ ನ್ಯಾಯಾಧೀಶೆಯಾಗಿರುವ ಕಾವೇರಿ ಭವೇಜಾ ಅವರು ಬರುವ ದಿನಗಳಲ್ಲಿ ಹೊಸ ದೋಷಾರೋಪ ಪಟ್ಟಿಯನ್ನು ಪರಿಗಣಿಸುವ ಸಾಧ್ಯತೆಗಳಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

ಹಣ ಅಕ್ರಮ ವರ್ಗಾವಣೆ ಕಾಯ್ದೆ ಅನ್ವಯ (ಪಿಎಂಎಲ್ಎ) ಆರೋಪಿಗಳ ವಿರುದ್ಧ ಪ್ರಕರಣವು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಎಪಿ ಸಂಚಾಲಕರೂ ಆದ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಇ.ಡಿ ಮಾರ್ಚ್‌ 21ರಂದು ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಅವರು, ಸದ್ಯ ಮಧ್ಯಂತರ ಜಾಮೀನು ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ.

ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅವರನ್ನು ಇದುವರೆಗೂ ‘ಹಗರಣದ ರೂವಾರಿ, ಪ್ರಮುಖ ಸಂಚುಕೋರ’ ಎಂದೇ ಇ.ಡಿ ಗುರುತಿಸುತ್ತಿತ್ತು. ದೆಹಲಿ ಸರ್ಕಾರ, ಸಚಿವರು, ಎಎಪಿ ನಾಯಕರ ಜೊತೆಗೂಡಿ ಸಂಚು ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು.

‘ಈಗ ರದ್ದುಗೊಂಡಿರುವ, ದೆಹಲಿ ಅಬಕಾರಿ ನೀತಿಯನ್ನು 2021–22ನೇ ಸಾಲಿಗಾಗಿ ರೂಪಿಸುವಲ್ಲಿ ಕೇಜ್ರಿವಾಲ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌.ವಿ.ರಾಜು ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದ್ದರು.

‘ಕೇಜ್ರಿವಾಲ್ ಅವರು ಸಪ್ತತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಅದರ ವೆಚ್ಚವನ್ನು ಈ ಪ್ರಕರಣದ ಆರೋಪಿಯೊಬ್ಬರು ಭರಿಸಿದ್ದಾರೆ. ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಾಗಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಕೇಜ್ರಿವಾಲ್ ಈ ಹಗರಣದ ಹೊಣೆಗಾರರು’ ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯವು ಈ ಹಿಂದೆ, ‘ಎಎಪಿಒಂದು ರಾಜಕೀಯ ಪಕ್ಷವಾಗಿ, ಜನಪ್ರಾತಿನಿಧ್ಯಕಾಯ್ದೆಯನುಸಾರ ಹಲವು ವ್ಯಕ್ತಿಗಳ ಸಮೂಹವಾಗಿದೆ. ಇದನ್ನು, ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್‌ 70ರ ಅನುಸಾರ ‘ಕಂಪನಿ’ ಎಂದು ವರ್ಗೀಕರಿಸಬಹುದು ಎಂದು ವ್ಯಾಖ್ಯಾನಿಸಿತ್ತು.

‘ಕೇಜ್ರಿವಾಲ್ ಅವರು ಈ ‘ಕಂಪನಿ’ಯಉಸ್ತುವಾರಿಯಾಗಿದ್ದು, ಅಕ್ರಮದ ಹೊಣೆಗಾರರಾಗಿದ್ದಾರೆ. ಅವರು ಮತ್ತು ಅವರ ಪಕ್ಷವನ್ನು ದೋಷಿ
ಗಳಾಗಿ ಪರಿಗಣಿಸಬೇಕು. ಕಾನೂನಿನ ಅನುಸಾರ ಶಿಕ್ಷೆಗೊಳಪಡಲು ಅವರು ಅರ್ಹರು’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪ್ರತಿಪಾದಿಸಿದರು.

ದೆಹಲಿ ಸರ್ಕಾರಕ್ಕಾಗಿ 2021–22ರಲ್ಲಿ ರೂಪಿಸಲಾಗಿದ್ದ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ತದನಂತರ, ಉಲ್ಲೇಖಿತ ಅಬಕಾರಿ ನೀತಿಯನ್ನು ರದ್ದುಪಡಿಸಲಾಗಿತ್ತು.

ಬಂಧನ ಪ್ರಶ್ನಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಪೀಠ

ನವದೆಹಲಿ (ಪಿಟಿಐ): ಜಾರಿ ನಿರ್ದೇಶನಾಲಯವು (ಇ.ಡಿ) ತಮ್ಮನ್ನು ಬಂಧಿಸಿದ್ದ ಕ್ರಮವನ್ನು ಪ್ರಶ್ನಿಸಿ  ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಅಲ್ಲದೆ ಸಾಮಾನ್ಯ ಜಾಮೀನು ಕೋರಿ ಅರ್ಜಿದಾರರು ಕೆಳಹಂತದ ಕೋರ್ಟ್‌ಗೆ ಅರ್ಜಿಸಲ್ಲಿಸಬಹುದು ಎಂದೂ ಹೇಳಿದೆ. ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಹಾಗೂ ಇ.ಡಿ ‍ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಎಸ್‌.ವಿ.ರಾಜು ಅವರು ವಾದವನ್ನು ಮಂಡಿಸಿದರು. ‘ವಾದ ಆಲಿಸಿದ್ದು ತೀರ್ಪು ಕಾಯ್ದಿರಿಸಿದೆ. ಕಾಯ್ದೆ ಪ್ರಕಾರ ಜಾಮೀನಿಗಾಗಿ ಅರ್ಜಿದಾರರು ವಿಚಾರಣಾ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ದೀಪಂಕರ್ ದತ್ತಾ ಅವರಿದ್ದ ಪೀಠ ತಿಳಿಸಿತು. ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿ ತಿರಸ್ಕರಿಸಲಾಗಿದ್ದ ಅ. 30 2023ರ ನಂತರ ದಾಖಲಿಸಿದ್ದ ಸಾಕ್ಷಿಗಳು ಆರೋಪಿಗಳ ಹೇಳಿಕೆಗಳಿಗೆ ಸಂಬಂಧಿಸಿದ ಕಡತಗಳನ್ನು ಪೀಠವು ಪರಿಶೀಲಿಸಿತು. 

8ನೇ ಆರೋಪ ಪಟ್ಟಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ದಾಖಲಿಸುತ್ತಿರುವ 8ನೇ ಆರೋಪಪಟ್ಟಿ ಇದಾಗಿದೆ. ಇ.ಡಿ ಇದೇ ಮಾದರಿ ದೂರನ್ನು ಕಳೆದ ವಾರ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರ ವಿರುದ್ಧವೂ ದಾಖಲಿಸಿತ್ತು. ಈವರೆಗೆ ಒಟ್ಟು 18 ಜನರನ್ನು ಬಂಧಿಸಿದೆ. ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ ಸಂಸದ ಸಂಜಯ ಸಿಂಗ್‌ ಬಂಧಿತರಲ್ಲಿ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.