ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ಸಚಿವ ಪಾರ್ಥ ಚಟರ್ಜಿ ಆಪ್ತೆ 12 ಸೆಲ್‌ ಕಂಪನಿಗಳ ಒಡತಿ

ಪಿಟಿಐ
Published 25 ಜುಲೈ 2022, 12:53 IST
Last Updated 25 ಜುಲೈ 2022, 12:53 IST
ಅರ್ಪಿತಾ ಮುಖರ್ಜಿ
ಅರ್ಪಿತಾ ಮುಖರ್ಜಿ   

ಕೋಲ್ಕತ್ತ: ‘ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ 12 ಸೆಲ್‌ ಕಂಪನಿಗಳನ್ನು ನಡೆಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ’ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅರ್ಪಿತಾ ಅವರಿಗೆ ಸೇರಿದ ಜೋಕಾ ಫ್ಲ್ಯಾಟ್‌ನಲ್ಲಿ ಶನಿವಾರ ಸಂಜೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಸೆಲ್‌ ಕಂಪನಿಗಳನ್ನು ನಡೆಸುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಅರ್ಪಿತಾ ಅವರು ಬೆಂಗಾಲಿ ಹಾಗೂ ಒರಿಯಾ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು, ಒಡಿಶಾ ಹಾಗೂ ತಮಿಳುನಾಡಿನ ಹಲವು ನಟ–ನಟಿಯರ ಜೊತೆ ಸಂಪರ್ಕ ಹೊಂದಿದ್ದು ಅವರ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಅನುಮಾನವಿದೆ. ನಟ–ನಟಿಯರ ಚಲನ ವಲನಗಳ ಮೇಲೆ ನಿಗಾ ಇಡಲಾಗಿದ್ದು, ಶೀಘ್ರವೇ ವಿಚಾರಣೆಗೆ ಕರೆಸಿ ಮಾಹಿತಿ ಪಡೆಯುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಅರ್ಪಿತಾ ಅವರ ಮನೆಯಲ್ಲಿ ಕೆಲ ಮಹತ್ವದ ದಾಖಲೆಗಳು, ಕಡತಗಳು ಹಾಗೂ ಸಹಿ ಮಾಡಿರುವ ಪತ್ರಗಳೂ ಸಿಕ್ಕಿವೆ. ಅವರು ಚಲನಚಿತ್ರ ನಿರ್ಮಾಣ ಸಂಸ್ಥೆಯಲ್ಲೂ ಹೂಡಿಕೆ ಮಾಡಿದ್ದಾರೆ ಎಂಬುದನ್ನು ಅವು ಪುಷ್ಠೀಕರಿಸುವಂತಿವೆ. ಈ ದಿಸೆಯಲ್ಲೂ ತನಿಖೆ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ ಅರ್ಪಿತಾ ಮನೆಯಲ್ಲಿದಾಖಲೆಯಿಲ್ಲದ ನಗದು ಪತ್ತೆಯಾಗಿತ್ತು. ಹೀಗಾಗಿ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯವು ಒಂದು ದಿನದ ಮಟ್ಟಿಗೆಅವರನ್ನು ಇ.ಡಿ ಸುಪರ್ದಿಗೆ ಒಪ್ಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.