ರಾಂಚಿ: ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಅವರನ್ನು ಬಂಧಿಸಿದ್ದಾರೆ.
ಹಣಕಾಸು ಅಕ್ರಮದ ಕುರಿತಂತೆ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಹಾರಿಕೆಯ ಉತ್ತರ ನೀಡಿರುವ ಪಂಕಜ್ ಮಿಶ್ರಾರನ್ನು ಇಡಿ ಅಧಿಕಾರಿಗಳು ಬುಧವಾರ ರಾಂಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಬಳಿಕ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಿದ್ದಾರೆ.
ವಾರದ ಹಿಂದೆ ಇ.ಡಿ ಅಧಿಕಾರಿಗಳು ಪಂಕಜ್ ಮಿಶ್ರಾಗೆ ಸೇರಿದ ಜಾಗಗಳಲ್ಲಿ ದಾಳಿ ನಡೆಸಿ, ಹಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು.
ಜತೆಗೆ ಆ ಸಂದರ್ಭದಲ್ಲಿ ಪಂಕಜ್ ಮತ್ತು ದಾಹೂ ಯಾದವ್ ಅವರಿಗೆ ಸೇರಿದ್ದ 37 ಬ್ಯಾಂಕ್ ಖಾತೆಗಳಲ್ಲಿದ್ದ ₹11.88 ಕೋಟಿ ವಶಕ್ಕೆ ಪಡೆಯಲಾಗಿತ್ತು. ಮತ್ತು ಯಾವುದೇ ದಾಖಲೆಗಳಿಲ್ಲದ ₹5.34 ಕೋಟಿ ಇ.ಡಿ ವಶಕ್ಕೆ ಪಡೆದಿದ್ದು, ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧವಿರುವುದನ್ನು ಪತ್ತೆಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.