ನವದೆಹಲಿ: ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ಬೆಟ್ಟಿಂಗ್ ಆ್ಯಪ್ ಕಂಪನಿಯಿಂದ ₹ 508 ಕೋಟಿ ಪಡೆದಿದ್ದಾರೆ ಎಂಬ ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿಕೆಯು ಶನಿವಾರ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಇದು ಸಿ.ಎಂ ವರ್ಚಸ್ಸು ಹಾಳು ಮಾಡುವ ಪಿತೂರಿ ಎಂದು ಕಾಂಗ್ರೆಸ್ ಟೀಕಿಸಿದರೆ, ಹವಾಲಾ ಮೂಲಕ ಸಾಗಿಸಲಾದ ಅಕ್ರಮ ಹಣವನ್ನು ಚುನಾವಣಾ ವೆಚ್ಚಗಳಿಗೆ ಬಳಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಛತ್ತೀಸಗಢದಲ್ಲಿ ಮೊದಲ ಹಂತದ ಮತದಾನಕ್ಕೆ ಕೇವಲ ನಾಲ್ಕು ದಿನ ಇರುವಾಗ ಬಘೆಲ್ ಕುರಿತು ಇ.ಡಿ ನೀಡಿರುವ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರು ವಾಕ್ಸಮರದಲ್ಲಿ ತೊಡಗಿದ್ದಾರೆ.
ತನಿಖಾ ಸಂಸ್ಥೆ ವಶದಲ್ಲಿರುವ ‘ಕ್ಯಾಶ್ ಕೊರಿಯರ್’ ನ ಹೇಳಿಕೆ ಕುರಿತು ತನಿಖೆ ನಡೆಸದೆ ಬಘೆಲ್ ಹಣ ಪಡೆದಿದ್ದಾರೆ ಎಂಬ ಇ.ಡಿ. ಹೇಳಿಕೆ ವಿರುದ್ಧ ಕಾಂಗ್ರೆಸ್ ಸೋಮವಾರ ಚುನಾವಣಾ ಆಯೋಗವನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಜನರನ್ನು ಲೂಟಿ ಮಾಡುವ ಮೂಲಕ ದುಬೈನಿಂದ ಬಂದ ಹಣವನ್ನು ಕಾಂಗ್ರೆಸ್ ಚುನಾವಣೆಗೆ ಬಳಸಿದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಬಿಜೆಪಿ ಹೇಳಿದರೆ, ಕಳೆದ 18 ತಿಂಗಳಲ್ಲಿ ರಾಜ್ಯ ಪೊಲೀಸರು 450 ಜನರನ್ನು ಬಂಧಿಸಿದ್ದಾರೆ ಮತ್ತು ಆಗಸ್ಟ್‌ನಲ್ಲಿ ಬಘೆಲ್ ಒತ್ತಾಯಿಸಿದ್ದರೂ ಕೇಂದ್ರವು ಬೆಟ್ಟಿಂಗ್ ಆ್ಯಪ್ ಪ್ರವರ್ತಕರ ವಿರುದ್ಧ ಲುಕ್ ಔಟ್ ನೋಟಿಸ್ ಏಕೆ ಹೊರಡಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಛತ್ತೀಸಗಢದ ದುರ್ಗ್‌ನಲ್ಲಿ ನಡೆದ ಬಿಜೆಪಿ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಹಣವು ಜೂಜುಕೋರರಿಗೆ ಸೇರಿದೆ ಎಂದು ಜನರು ಹೇಳುತ್ತಾರೆ. ಲೂಟಿ ಹಣ ಕಾಂಗ್ರೆಸ್ ನಾಯಕರ ಮನೆ ತುಂಬುತ್ತಿದೆ. ದುಬೈನಲ್ಲಿ ಇರುವವರೊಂದಿಗೆ ಏನು ಸಂಬಂಧವಿದೆ ಎಂದು ಸರ್ಕಾರ ಮತ್ತು ಮುಖ್ಯಮಂತ್ರಿ ಜನರಿಗೆ ತಿಳಿಸಬೇಕು’ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ಆಡಳಿತಾರೂಢ ಬಿಜೆಪಿಯ ಸೋಲು ಖಚಿತವಾಗುತ್ತಿದ್ದಂತೆ ಇ.ಡಿಯನ್ನು ಬಳಸಲಾಗುತ್ತಿದೆ. ಮುಖ್ಯಮಂತ್ರಿ ವರ್ಚಸ್ಸಿಗೆ ಧಕ್ಕೆ ತರುವುದು ಇದರ ಉದ್ದೇಶ. ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಯಾವುದೇ ತನಿಖೆ ನಡೆಸದೆ ಇ.ಡಿ ತನ್ನ ಹೇಳಿಕೆಯಲ್ಲಿ ಬಘೆಲ್ ಹೆಸರು ಉಲ್ಲೇಖಿಸಿರುವುದನ್ನು ಪ್ರಶ್ನಿಸಿರುವ ಅವರು, ಈ ರೀತಿಯ ತಂತ್ರಗಾರಿಕೆ ಕೆಲಸ ಮಾಡುವುದಿಲ್ಲ. ಜನರು ಮೂರ್ಖರಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಗ್ವಿ, ಛತ್ತೀಸಗಢ ಪೊಲೀಸರು ಕಳೆದ 18 ತಿಂಗಳಲ್ಲಿ ತನಿಖೆ ನಡೆಸಿ, 449 ಜನರನ್ನು ಬಂಧಿಸಿ, ₹16.41 ಕೋಟಿ ನಗದು, ಬ್ಯಾಂಕ್ ಖಾತೆ, ₹1.5 ಕೋಟಿ ಆಸ್ತಿ, 191 ಲ್ಯಾಪ್‌ಟಾಪ್, 865 ಮೊಬೈಲ್ ಫೋನ್ ಮತ್ತು 200 ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಬೆಟ್ಟಿಂಗ್ ಆ್ಯಪ್ ನಿಷೇಧಕ್ಕೆ ಮತ್ತು ದುಬೈ ಮೂಲದ ಪ್ರವರ್ತಕರ ಬಂಧನಕ್ಕೆ ಬಘೆಲ್ ಒತ್ತಾಯಿಸಿದ್ದರೂ ಕ್ರಮ ಏಕೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
‘ಅಧಿಕಾರದಲ್ಲಿದ್ದಾಗ ಬಘೆಲ್ ಬೆಟ್ಟಿಂಗ್ ಆಟ ಆಡುತ್ತಿದ್ದಾರೆ’ ಎಂದು ಆರೋಪಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಹವಾಲಾ ಆಪರೇಟರ್‌ಗಳ ಸೂಚನೆ ಮತ್ತು ಬಡವರನ್ನು ಲೂಟಿ ಮಾಡುವ ಮೂಲಕ ದುಬೈನಿಂದ ಬಂದ ಹಣವನ್ನು ಕಾಂಗ್ರೆಸ್ ಚುನಾವಣೆಗೆ ಬಳಸಿದೆ ಎಂದು ಸ್ಪಷ್ಟವಾಗಿ ಸೂಚಿಸುವ ಪುರಾವೆಗಳು ಈ ಹಿಂದೆ ಸಿಕ್ಕಿರಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.