ADVERTISEMENT

‘ಆಸ್ತಿ ಸೃಜಿಸಲು ಕ್ರೈಸ್ತ ಮಿಶನರಿ ಒಎಮ್‌ ಗ್ರೂಪ್‌ನಿಂದ ಹಣ ಬಳಕೆ’

ಹೈದರಾಬಾದ್‌: ತನಿಖೆಯಿಂದ ಪತ್ತೆ– ಇ.ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 20:26 IST
Last Updated 25 ಜೂನ್ 2024, 20:26 IST
ಜಾರಿ ನಿರ್ದೇಶನಾಲಯ 
ಜಾರಿ ನಿರ್ದೇಶನಾಲಯ    

ಹೈದರಾಬಾದ್‌: ನಗರ ಮೂಲದ ಒಎಂ ಗ್ರೂಪ್‌ ಆಫ್‌ ಚಾರಿಟೀಸ್‌ ಇಂಡಿಯಾ ದತ್ತಿ ಕಾರ್ಯಗಳಿಗಾಗಿ ಸಂಗ್ರಹಿಸಿದ ನಿಧಿಯನ್ನು ಅಸ್ತಿಗಳ ಸೃಷ್ಟಿಗಾಗಿ ವಿನಿಯೋಗಿಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ.

ಸಂಸ್ಥೆ ವಿರುದ್ಧ ಕೇಳಿ ಬಂದಿದ್ದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೈದರಾಬಾದ್‌ ಮತ್ತು ಸುತ್ತಮುತ್ತ 11 ಸ್ಥಳಗಳಲ್ಲಿ ಇತ್ತೀಚೆಗೆ ಶೋಧ ಕೈಗೊಂಡಿದ್ದರು.

ಸಂಸ್ಥೆ ವಿರುದ್ಧ ತೆಲಂಗಾಣದ ಸಿಐಡಿ ದಾಖಲಿಸಿದ್ದ ಎಫ್‌ಐಆರ್‌ ಆಧಾರದ ಮೇಲೆ ಇ.ಡಿ ತನಿಖೆ ನಡೆಸುತ್ತಿದೆ.

ADVERTISEMENT

ಸಂಸ್ಥೆಯಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೊರ್ವಿಪಾಗಾ ಆಲ್ಬರ್ಟ್ ಲಾಯೆಲ್‌ ಎಂಬುವವರು ಸಂಸ್ಥೆಯ ಮುಖ್ಯಸ್ಥ ಜೋಸೆಫ್ ಡಿಸೋಜಾ ಎಂಬುವವರ ವಿರುದ್ಧ ಅವ್ಯವಹಾರದ ಆರೋಪ ಮಾಡಿದ್ದರು. 2016ರಲ್ಲಿ ಲಾಯೆಲ್‌ ಅವರು ನೀಡಿದ್ದ ದೂರಿನ ಆಧಾರದಲ್ಲಿ ಸಿಐಡಿ ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.

ಸಂಸ್ಥೆಯು ಗುಡ್‌ ಶೆಫರ್ಡ್‌ ಸ್ಕೂಲ್ಸ್‌ ಹೆಸರಿನಲ್ಲಿ 100ಕ್ಕೂ ಅಧಿಕ ಶಾಲೆಗಳನ್ನು ನಡೆಸುತ್ತಿದೆ. ಈ ಶಾಲೆಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಮತ್ತು ತುಳಿತಕ್ಕೆ ಒಳಗಾದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಊಟ ನೀಡುವ ಹೆಸರಿನಲ್ಲಿ ಸಂಸ್ಥೆಯು ವಿದೇಶಿ ದಾನಿಗಳಿಂದ ₹300 ಕೋಟಿಯಷ್ಟು ಹಣವನ್ನು ಸಂಗ್ರಹಿಸಿತ್ತು. ಆದರೆ, ಈ ಹಣವನ್ನು ಅಕ್ರಮ ಉದ್ದೇಶಗಳಿಗೆ ಮತ್ತು ಆಸ್ತಿಗಳನ್ನು ಸೃಜಿಸಲು ಬಳಸಿಕೊಳ್ಳಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

‘ಆಪರೇಷನ್ ಮೊಬಿಲೈಜೇಷನ್ ಅಂಡ್‌ ದಲಿತ್ ಫ್ರೀಡಂ ನೆಟ್‌ವರ್ಕ್’ ಎಂಬ ಸಂಘಟನೆ ಮೂಲಕ ಒಎಮ್‌ ಗ್ರೂಪ್‌ ವಿವಿಧ ದೇಶಗಳಲ್ಲಿ ಹಣ ಸಂಗ್ರಹಿಸಿದೆ.  ಅಮೆರಿಕ, ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ, ಅರ್ಜೆಂಟಿನಾ, ಡೆನ್ಮಾರ್ಕ್, ಜರ್ಮನಿ, ಫಿನ್‌ಲೆಂಡ್, ಐರ್ಲೆಂಡ್, ಮಲೇಷ್ಯಾ, ನಾರ್ವೆ, ಬ್ರೆಜಿಲ್, ಜೆಕ್‌ ಗಣರಾಜ್ಯ, ಫ್ರಾನ್ಸ್, ರೊಮೇನಿಯಾ, ಸಿಂಗಪುರ, ಸ್ವೀಡನ್‌ ಹಾಗೂ ಸ್ವಿಜರ್ಲೆಂಡ್ ದೇಶಗಳಲ್ಲಿ ಈ ಸಂಘಟನೆಯ ಶಾಖೆಗಳಿಗೆ ಎಂದು ಇ.ಡಿ ಹೇಳಿದೆ.

ಒಎಮ್‌ ಗ್ರೂಪ್‌ ಆಫ್‌ ಚಾರಿಟೀಸ್‌ ಇಂಡಿಯಾ ಸಂಸ್ಥೆಯನ್ನು 1960ರಲ್ಲಿ ಮಿಶನರೀಸ್‌ ಆಫ್‌ ಒಎಮ್ ಇಂಟರ್‌ನ್ಯಾಷನಲ್ ಸ್ಥಾಪಿಸಿತ್ತು. 110 ದೇಶಗಳಲ್ಲಿ ಸಂಸ್ಥೆಯು ಕಾರ್ಯಾಚರಣೆ ಮಾಡುತ್ತಿದೆ. ತೆಲಂಗಾಣದ ಜೀಡಿಮೆಟ್ಲದಲ್ಲಿ ಒಎಮ್‌ ಇಂಡಿಯಾದ ಕಚೇರಿಗಳು, ತರಬೇತಿ ಕೇಂದ್ರಗಳು ಹಾಗೂ ಇತರ ಸೌಲಭ್ಯಗಳಿವೆ.

ಕೆಲ ವರ್ಷಗಳ ಹಿಂದೆ, ಸಂಸ್ಥೆಯ ಭಾರತದಲ್ಲಿನ ಶಾಖೆಯು ಮಾತೃಸಂಸ್ಥೆಯೊಂದಿಗೆ ಸಂಬಂಧ ಕಡಿದುಕೊಂಡಿತ್ತಲ್ಲದೇ, ಸ್ವತಂತ್ರವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ.

ತನಿಖಾ ವರದಿಯಲ್ಲಿ ಇ.ಡಿ ಉಲ್ಲೇಖಿಸಿರುವ ಅಂಶಗಳು

* ಒ.ಎಮ್‌ ಗ್ರೂಪ್‌ ಆಫ್‌ ಚಾರಿಟೀಸ್ ತಾನು ಸಂಗ್ರಹಿಸಿದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ * ತೆಲಂಗಾಣ ಗೋವಾ ಕೇರಳ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿರುವ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳ ಸ್ಥಿರಾಸ್ತಿಗಳಿಗೆ ಸಂಬಂಧಿಸಿ ಸಂಶಯಾಸ್ಪದ ಹಣಕಾಸು ವ್ಯವಹಾರ ನಡೆದಿರುವುದು ಕಂಡುಬಂದಿದೆ * ಸಂಸ್ಥೆಯ ಬಹುತೇಕ ಅಂಗಸಂಸ್ಥೆಗಳ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಿಲ್ಲ. ಇದನ್ನು ಮುಚ್ಚಿ ಹಾಕುವುದಕ್ಕಾಗಿ ‘ಒ.ಎಮ್ ಬುಕ್ಸ್‌ ಫೌಂಡೇಷನ್’ ಹೆಸರಿನಡಿ ನೋಂದಾಯಿತ ಸಂಸ್ಥೆಯಿಂದ ವಿದೇಶಿ ದೇಣಿಗೆ ಸಂಗ್ರಹಿಸಿ ಅದನ್ನು ಅಂಗಸಂಸ್ಥೆಗಳಿಗೆ ಸಾಲದ ಹೆಸರಿನಲ್ಲಿ ನೀಡಲಾಗಿದೆ * ಆಪರೇಷನ್ ಮೊಬಿಲೈಜೇಷನ್ ಗ್ರೂಪ್‌ನ ಪದಾಧಿಕಾರಿಗಳನ್ನು ಗೋವಾದಲ್ಲಿ ಸ್ಥಾಪಿಸಿರುವ ‘ಶೆಲ್’ ಕಂಪನಿಗಳ ಕನ್ಟಲ್ಟಂಟ್‌ಗಳು ಎಂಬುದಾಗಿ ತೋರಿಸಿ ಅವರಿಗೆ ವೇತನ ನೀಡಲಾಗಿದೆ * ವಿದ್ಯಾರ್ಥಿಗಳ ಪ್ರಾಯೋಜಕತ್ವ ಪಡೆದ ಸಂಗತಿಯನ್ನು ಮುಚ್ಚಿಟ್ಟ ಸಂಸ್ಥೆ  ಬೋಧನಾ ಮತ್ತು ಇತರ ಶುಲ್ಕದ ಹೆಸರಿನಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಗಳಿಂದ ₹1000 ದಿಂದ ₹1500 ಸಂಗ್ರಹಿಸಿದೆ * ಭಾರಿ ಪ್ರಮಾಣದ ಹಣವನ್ನು ನಿಶ್ಚಿತ ಠೇವಣಿಯಾಗಿಟ್ಟಿದೆ * ಶಿಕ್ಷಣ ಹಕ್ಕು ಕಾಯ್ದೆಯಡಿಯೂ ಸಂಸ್ಥೆ ಸರ್ಕಾರದಿಂದ ಹಣ ಪಡೆದಿದೆ. ಆದರೆ ಈ ಬಗ್ಗೆ ಸರಿಯಾದ ದಾಖಲೆಗಳನ್ನು ನಿರ್ವಹಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.