ADVERTISEMENT

ಆಯುಷ್ಮಾನ್‌ ಭಾರತ್‌ ಯೋಜನೆ ವಂಚನೆ: ಕಾಂಗ್ರೆಸ್ ಶಾಸಕ ಬಾಲಿ ನಿವಾಸದಲ್ಲಿ ಇ.ಡಿ ಶೋಧ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 14:40 IST
Last Updated 31 ಜುಲೈ 2024, 14:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಿಮ್ಲಾ: ಆಯುಷ್ಮಾನ್‌ ಭಾರತ್‌ ಯೋಜನೆ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಶಾಸಕ ಆರ್‌.ಎಸ್ ಬಾಲಿ ಅವರ ನಿವಾಸ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದರು.

ಶಿಮ್ಲಾ, ಕಂಗಡಾ, ಉನಾ, ಮಂಡಿ ಮತ್ತು ಕುಲ್ಲು ಜಿಲ್ಲೆಗಳ 19 ಸ್ಥಳಗಳಲ್ಲಿ ಶೋಧ ನಡೆಸಲಾಯಿತು ಎಂದು ತಿಳಿಸಿದರು.

ADVERTISEMENT

ಬಾಲಿ ಅವರ ನಿವಾಸ, ಕಂಗಡಾದಲ್ಲಿರುವ ಫೋರ್ಟಿಸ್‌ ಆಸ್ಪತ್ರೆ, ಬಾಲಾಜಿ ಆಸ್ಪತ್ರೆ ಮತ್ತು ಇದರ ಪ್ರವರ್ತಕರಾದ ರಾಜೇಶ್‌ ಶರ್ಮಾ ಅವರ ನಿವಾಸದಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದರು.

ಅಧಿಕಾರಿಗಳ ಪ್ರಕಾರ, ಶರ್ಮಾ ಅವರು ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್ ಸುಖು ಅವರ ನಿಕಟವರ್ತಿ. ಇತ್ತೀಚೆಗೆ ದೆಹರಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಮುಖ್ಯಮಂತ್ರಿ ಪತ್ನಿ ಕಮಲೇಶ್ ಠಾಕೂರ್ ಅವರಿಗೆ ಬಿಟ್ಟುಕೊಟ್ಟಿದ್ದರು. ಅವರು ಚುನಾವಣೆಯಲ್ಲಿ ಗೆದ್ದರು.

ಬಾಲಿ ಅವರು ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಇಲಾಖೆ ನಿಗಮದ ಮುಖ್ಯಸ್ಥರು ಮತ್ತು ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ.

ಆಯುಷ್ಮಾನ್‌ ಭಾರತ್ ಯೋಜನೆಯಡಿ ನಕಲಿ ಕಾರ್ಡುಗಳನ್ನು ಮಾಡಿಸಿದ ಆರೋಪದ ಮೇಲೆ ಕಿರಣ್‌ ಸೋನಿ, ಉನಾ ಮೂಲಕ ಶ್ರೀ ಬಂಕಿ ಬಿಹಾರಿ ಆಸ್ಪತ್ರೆ ಮತ್ತು ಇತರರ ಮೇಲೆ ಜುಲೈ 16ರಂದು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿದೆ.

ಯೋಜನೆಯ ಕಾರ್ಡುಗಳನ್ನು ಬಳಸಿ ಅಂದಾಜು ₹25 ಕೋಟಿ ವಂಚನೆ ಮಾಡಲಾಗಿದೆ ಎಂದು ಇ.ಡಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.