ADVERTISEMENT

ಆರ್‌.ಜಿ. ಕರ್‌ ಆಸ್ಪತ್ರೆ ಹಣಕಾಸು ಅಕ್ರಮ ಪ್ರಕರಣ: ಘೋಷ್‌ ಆಪ್ತ ಇ.ಡಿ ವಶಕ್ಕೆ

ಪಿಟಿಐ
Published 6 ಸೆಪ್ಟೆಂಬರ್ 2024, 16:06 IST
Last Updated 6 ಸೆಪ್ಟೆಂಬರ್ 2024, 16:06 IST
<div class="paragraphs"><p>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಾಕಾರರು ಹೌರಾದಲ್ಲಿ ನಡೆಸಿದ ಮೆರವಣಿಗೆಯನ್ನು ಪೊಲೀಸರು ತಡೆದರು</p></div>

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಾಕಾರರು ಹೌರಾದಲ್ಲಿ ನಡೆಸಿದ ಮೆರವಣಿಗೆಯನ್ನು ಪೊಲೀಸರು ತಡೆದರು

   

–ಪಿಟಿಐ ಚಿತ್ರ 

ಕೋಲ್ಕತ್ತ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರ ಆಪ್ತನನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ADVERTISEMENT

ಕಲ್ಕತ್ತಾ ನ್ಯಾಷನಲ್‌ ವೈದ್ಯಕೀಯ ಕಾಲೇಜಿನಲ್ಲಿ (ಸಿಎನ್‌ಎಂಸಿ) ಡಾಟಾ ಎಂಟ್ರಿ ಆಪರೇಟರ್‌ ಆಗಿರುವ ಪ್ರಸೂನ್‌ ಚಟ್ಟೋಪಾಧ್ಯಾಯ್‌ ಅವರನ್ನು ವಿಚಾರಣೆ ಬಳಿಕ ವಶಕ್ಕೆ ಪಡೆಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇ.ಡಿ ಅಧಿಕಾರಿಗಳ ತಂಡವೊಂದು ದಕ್ಷಿಣ 24 ಪರಗಣ ಜಿಲ್ಲೆಯ ಸುಭಾಷ್‌ಗ್ರಾಮದಲ್ಲಿರುವ ಪ್ರಸೂನ್‌ ಅವರ ಮನೆಯಲ್ಲಿ ಶುಕ್ರವಾರ ಬೆಳಿಗ್ಗೆ ಶೋಧ ಕಾರ್ಯ ಆರಂಭಿಸಿದೆ. ಸುಮಾರು ಏಳು ಗಂಟೆಗಳ ಶೋಧದ ಬಳಿಕ ಮಧ್ಯಾಹ್ನ 2ರ ವೇಳೆಗೆ ಅಧಿಕಾರಿಗಳು ಪ್ರಸೂನ್‌ ಅವರನ್ನು ತಮ್ಮ ಜತೆ ಕರೆದೊಯ್ದರು.

ಇದೇ ಜಿಲ್ಲೆಯ ಮಧ್ಯ ನಾರಾಯಣಪುರ ಎಂಬಲ್ಲಿ ಘೋಷ್‌ ಅವರು ಮೂರು ವರ್ಷಗಳ ಹಿಂದೆ ನಿರ್ಮಿಸಿರುವ ಫಾರ್ಮ್‌ ಹೌಸ್‌ಗೂ ಪ್ರಸೂನ್‌ ಅವರನ್ನು ಕರೆದೊಯ್ದ ತನಿಖಾ ತಂಡ, ಮಾಹಿತಿಗಳನ್ನು ಕಲೆಹಾಕಿದೆ. 

ಸಿಎನ್‌ಎಂಸಿನಲ್ಲಿ ಕೆಲಸ ಮಾಡುತ್ತಿದರೂ ಪ್ರಸೂನ್‌ ಅವರು ತಮ್ಮನ್ನು ಘೋಷ್ ಅವರ ಆಪ್ತ ಸಹಾಯಕ ಎಂದು ಗುರುತಿಸಿಕೊಳ್ಳುತ್ತಿದ್ದರು. ಸಿಎನ್‌ಎಂಸಿನಲ್ಲಿರುವ ಕಚೇರಿಯ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿದ ಬಳಿಕ ಅವರು ಆರ್‌.ಜಿ. ಕರ್‌ ಆಸ್ಪತ್ರೆಗೆ ಬಂದು ಘೋಷ್‌ ಜತೆ ಇರುತ್ತಿದ್ದರು ಎಂದು ಮೂಲಗಳು ಹೇಳಿವೆ.

ಪೂರ್ವ ಕೋಲ್ಕತ್ತದ ಬೆಲಿಯಾಘಾಟಾದಲ್ಲಿರುವ ಘೋಷ್‌ ಅವರ ನಿವಾಸ ಮತ್ತು ಮಿಲನ್‌ ಪಲ್ಲಿ ಪ್ರದೇಶದಲ್ಲಿರುವ ಅವರ ಸಂಬಂಧಿಕರ ಅಪಾರ್ಟ್‌ಮೆಂಟ್‌ಗಳಲ್ಲೂ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಘೋಷ್‌ ಹಾಗೂ ಇತರ ಮೂವರನ್ನು ಸೆಪ್ಟೆಂಬರ್‌ 3ರಂದು ಬಂಧಿಸಿತ್ತು. ಆರ್‌.ಜಿ.ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಘಟನೆ ಬೆನ್ನಲ್ಲೇ ಘೋಷ್‌ ಅವರು ಪ್ರಾಂಶುಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದರು. 

ಮನವಿ ತಿರಸ್ಕರಿಸಿದ ‘ಸುಪ್ರೀಂ’

ನವದೆಹಲಿ: ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮ ಪ್ರಕರಣದಲ್ಲಿ ತಮ್ಮನ್ನು ಕಕ್ಷಿದಾರರನ್ನಾಗಿ ಪರಿಗಣಿಸಬೇಕೆಂದು ಕೋರಿ ಸಂದೀಪ್‌ ಘೋಷ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ತಮ್ಮ ಅರ್ಜಿಯನ್ನು ವಜಾಗೊಳಿಸಿರುವ ಕಲ್ಕತ್ತ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

‘ಈ ಪ್ರಕರಣದಲ್ಲಿ ಆರೋಪಿಯಾಗಿರುವ ಘೋಷ್‌ ಅವರಿಗೆ ನ್ಯಾಯಾಲಯದಲ್ಲಿ ಇಂತಹ ಮನವಿ ಮಾಡಲು ಕಾನೂನಿನಡಿ ಅವಕಾಶ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ಹೇಳಿತು.

ಬಿಜೆಪಿಯಿಂದ ರಸ್ತೆ ತಡೆ

ಕೋಲ್ಕತ್ತ: ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಶುಕ್ರವಾರ ಪಶ್ಚಿಮ ಬಂಗಾಳದಾದ್ಯಂತ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಯಿತು. ಪಕ್ಷದ ಕಾರ್ಯಕರ್ತರು ಕೋಲ್ಕತ್ತದ ಶ್ಯಾಮ್‌ಬಜಾರ್‌ ಲೇಕ್ ಟೌನ್ ವಿಐಪಿ ರಸ್ತೆ ಸಾಲ್ಟ್ ಲೇಕ್ ಮತ್ತು ರಾಜ್‌ಪುರ ಒಳಗೊಂಡಂತೆ ಹಲವೆಡೆ ಮಧ್ಯಾಹ್ನ 1ರಿಂದ 2ರ ವರೆಗೆ ರಸ್ತೆ ತಡೆ ನಡೆಸಿದರು. ಇತರ ಜಿಲ್ಲೆಗಳ ಕೇಂದ್ರಗಳಲ್ಲೂ ಇದೇ ರೀತಿಯ ಪ್ರತಿಭಟನೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.