ನವದೆಹಲಿ: ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ಟೆಕ್ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ನಾಗ್ಪುರದ ಸುಮಾರು 35 ಕಡೆಗಳಲ್ಲಿ ಶೋಧ ನಡೆಸಿದೆ.
ಆಮ್ಟೆಕ್ ಗ್ರೂಪ್ ವಿರುದ್ಧ ₹20 ಸಾವಿರ ಕೋಟಿ ಬ್ಯಾಂಕ್ ವಂಚನೆ ಆರೋಪವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅರವಿಂದ್ ಧಾಮ್, ಗೌತಮ್ ಮಲ್ಹೋತ್ರಾ ಹಾಗೂ ಇತರರ ಒಡೆತನದ ಆಮ್ಟೆಕ್ ಗ್ರೂಪ್ ಮತ್ತು ಅದರ ನಿರ್ದೇಶಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಇ.ಡಿ ಪ್ರಕರಣ ದಾಖಲಿಸಿಕೊಂಡಿದೆ.
ದೆಹಲಿ, ಗುರುಗ್ರಾಮ್, ನೋಯ್ಡಾ, ಮುಂಬೈ ಮತ್ತು ನಾಗ್ಪುರದಲ್ಲಿ ಸುಮಾರು 35 ವ್ಯವಹಾರ ಮತ್ತು ವಸತಿ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆಯಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಆಮ್ಟೆಕ್-ಎಸಿಐಎಲ್ ಲಿಮಿಟೆಡ್ ವಿರುದ್ಧ ಈ ಮೊದಲು ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ₹20 ಸಾವಿರ ಕೋಟಿಗಿಂತ ಹೆಚ್ಚಿನ ಬ್ಯಾಂಕ್ ವಂಚನೆಯ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಕುರಿತು ಸುಪ್ರೀಂಕೋರ್ಟ್ ಕೂಡ ಜಾರಿ ನಿರ್ದೇಶನಾಲಯದ ತನಿಖೆಗೆ ಸೂಚಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇ.ಡಿ ತನಿಖೆ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಆರೋಪವೇನು?:
ಸಾಲದ ನಿಧಿಗಳನ್ನು ರಿಯಲ್ ಎಸ್ಟೇಟ್, ವಿದೇಶಿ ಹೂಡಿಕೆ ಮತ್ತು ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡಲಾಗಿದೆ. ಇದರಿಂದ ಸುಮಾರು ₹10,000 - ₹15,000 ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.