ರಾಂಚಿ: ಬಾಂಗ್ಲಾದೇಶದಿಂದ ಅಕ್ರಮ ಒಳನುಸುಳುವಿಕೆಯ ಜತೆಗೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಜಾರ್ಖಂಡ್‌ನ ಹಲವು ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಒಂದು ದಿನ ಮೊದಲು ಕೇಂದ್ರ ತನಿಖಾ ಸಂಸ್ಥೆಯ ರಾಂಚಿ ಕಚೇರಿ ಅಧಿಕಾರಿಗಳು ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಇದರ ಜತೆಗೆ ನೆರೆಯ ಎರಡು ರಾಜ್ಯಗಳ ಒಟ್ಟು 17 ಸ್ಥಳ ಗಳಲ್ಲಿ ಶೋಧ ಕೈಗೊಳ್ಳಲಾಗಿತ್ತು.
ನಕಲಿ ಆಧಾರ್ ಕಾರ್ಡ್‌ಗಳು, ನಕಲಿ ಪಾಸ್‌ಪೋರ್ಟ್‌ಗಳು, ಅಕ್ರಮ ಶಸ್ತ್ರಾಸ್ತ್ರ, ಸ್ಥಿರ ಆಸ್ತಿ ದಾಖಲೆಗಳು, ನಗದು, ಆಭರಣಗಳು, ನಕಲಿ ಕಾರ್ಡ್‌ಗಳನ್ನು ತಯಾರಿಸಲು ಬಳಸಿರುವ ಮುದ್ರಣ ಕಾಗದ ಮತ್ತು ಯಂತ್ರಗಳು ಹಾಗೂ ಖಾಲಿ ಅರ್ಜಿ ನಮೂನೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶೋಧ ಕಾರ್ಯ ಮುಂದುವರಿದಿದೆ ಎಂದು ಇ.ಡಿಯು ‘ಎಕ್ಸ್’ನಲ್ಲಿ ಹೇಳಿಕೆ ನೀಡಿದೆ.
ರಾಂಚಿಯ ಬರಿಯಾಟು ರಸ್ತೆಯಲ್ಲಿ ರುವ ಹೋಟೆಲ್ ಮತ್ತು ನಗರದ ರೆಸಾರ್ಟ್‌ನ ಹೊರಗೆ ಭದ್ರತೆಗೆ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಜಿಸಿರುವ ದೃಶ್ಯಗಳನ್ನು ಮಾಧ್ಯಮಗಳು ಪ್ರಸಾರ ಮಾಡಿವೆ.
ಇ.ಡಿ ತಂಡಗಳು ಲೆಡ್ಜರ್ ನಮೂದುಗಳು ಮತ್ತು ಹಣಕಾಸಿನ ದಾಖಲೆಗಳಿಗಾಗಿ ಶೋಧ ನಡೆಸುತ್ತಿವೆ.
ಬಾಂಗ್ಲಾದೇಶದ ಕೆಲ ಮಹಿಳೆಯರನ್ನು ಜಾರ್ಖಂಡ್‌ಗೆ ಒಳನುಸುಳುವಿಕೆ ಮತ್ತು ಕಳ್ಳಸಾಗಣೆ ಮಾಡಿ, ಆ ಮೂಲಕ ಅಕ್ರಮವಾಗಿ ಹಣ ಸಂಪಾದಿಸಲಾಗುತ್ತಿದೆ ಎಂಬ ಆರೋಪದ ತನಿಖೆಗೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ಡೆ ಅಡಿ ಪ್ರಕರಣ ಇ.ಡಿ ಸೆಪ್ಟೆಂಬರ್‌ನಲ್ಲಿ ದಾಖಲಿಸಿದೆ.
ಬಿಜೆಪಿಗೆ ನೆರವಾಗಲು ಇ.ಡಿ ದಾಳಿ: ಜೆಎಂಎಂ ಟೀಕೆ
ರಾಂಚಿ: ಮೊದಲ ಹಂತದ ಮತದಾನದ ಮುನ್ನಾ ದಿನ ಮಂಗಳವಾರ ರಾಜ್ಯದ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿರುವುದಕ್ಕೆ ಆಡಳಿತಾರೂಢ ಜೆಎಂಎಂ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ಕೇಸರಿ ಪಕ್ಷವು ಹೆಣೆದಿರುವ ಬಾಂಗ್ಲಾದೇಶಿಯರ ಒಳನುಸುಳುವಿಕೆಯ ಸುಳ್ಳಿನ ಸಂಕಥನ ಮುಂದಿಟ್ಟುಕೊಂಡು ಇ.ಡಿ ನಡೆಸಿರುವ ಈ ದಾಳಿಯು ಚುನಾವಣೆಯಲ್ಲಿ ಬಿಜೆಪಿಗೆ ‘ನೆರವಾಗುವ ಪ್ರಯತ್ನ’ ಎಂದು ಆರೋಪಿಸಿದೆ.
‘ಇ.ಡಿ ದಾಳಿಯು ಬಾಂಗ್ಲಾದೇಶದ ನುಸುಳುಕೋರರಿ ಗಾಗಿ ಅಲ್ಲ, ರಾಜ್ಯದಲ್ಲಿ ಬಿಜೆಪಿಯ ರಾಜಕೀಯ ನೆಲೆ ಉಳಿಸುವ ಕೊನೆಯ ಪ್ರಯತ್ನ’ ಎಂದು ಜೆಎಂಎಂ ನೇತೃತ್ವದ ಸರ್ಕಾರದ ಮಿತ್ರಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ.
ಜಾರ್ಖಂಡ್ ಬಾಂಗ್ಲಾದೇಶದ ಜತೆಗೆ ಗಡಿ ಹಂಚಿಕೊಂಡಿಲ್ಲ. ಬಿಜೆಪಿ ಆಡಳಿತದ ಅಸ್ಸಾಂ ಬಾಂಗ್ಲಾದೇಶ ದೊಂದಿಗೆ ಗಡಿ ಹಂಚಿಕೊಂಡಿದೆ. ಹಾಗಾಗಿ, ಜಾರ್ಖಂಡ್ ಬದಲಿಗೆ ಮೊದಲು ಅಸ್ಸಾಂನಲ್ಲಿ ಇ.ಡಿ ದಾಳಿ ನಡೆಸಬೇಕು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಬಿಜೆಪಿಯು ಜಾರ್ಖಂಡ್‌ಗೆ ಮತಗಳನ್ನು ಧ್ರುವೀಕರಿಸಲು ಕಳುಹಿಸಿದೆ. ಆದರೆ. ಕೇಸರಿ ಪಾಳಯ ಇದರಲ್ಲಿ
ಯಶಸ್ವಿಯಾಗುವುದಿಲ್ಲ ಎಂದು ಜಾರ್ಖಂಡ್‌ನ ಕಾಂಗ್ರೆಸ್ ವಕ್ತಾರ ರಾಕೇಶ್ ಸಿನ್ಹಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.