ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕೇಂದ್ರ ಕಚೇರಿ ಸೇರಿ ದೇಶದ 12 ಕಡೆ ಇ.ಡಿ ದಾಳಿ

ಪಿಟಿಐ
Published 2 ಆಗಸ್ಟ್ 2022, 9:40 IST
Last Updated 2 ಆಗಸ್ಟ್ 2022, 9:40 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ನವದೆಹಲಿ: ನ್ಯಾಷನಲ್ ಹೆರಾಲ್ಡ್‌ನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೆಶನಾಲಯವು(ಇ.ಡಿ) ದೆಹಲಿಯ ಕೇಂದ್ರ ಕಚೇರಿ ಸೇರಿದಂತೆ ದೇಶದ 12 ಕಡೆಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆ ನಡೆದ ವಾರದ ಬಳಿಕ ಈ ದಾಳಿ ನಡೆದಿದೆ.

‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ‘ಹಣ ವರ್ಗಾವಣೆಯ ಜಾಡು ಮತ್ತು ನ್ಯಾಷನಲ್ ಹೆರಾಲ್ಡ್ ಸಂಬಂಧಿತ ವಹಿವಾಟುಗಳಲ್ಲಿ ಭಾಗಿಯಾಗಿರುವ ಸಂಸ್ಥೆಗಳ ವಿರುದ್ಧ ಹೆಚ್ಚುವರಿ ಪುರಾವೆಗಳನ್ನು ಸಂಗ್ರಹಿಸಲು ಶೋಧ ನಡೆಸಲಾಗುತ್ತಿದೆ’ಎಂದು ಅವರು ಹೇಳಿದ್ದಾರೆ.

ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಲವರ ವಿಚಾರಣೆ ವೇಳೆ ಹೊಸ ಮಾಹಿತಿ ಕಲೆ ಹಾಕಿರುವ ಇ.ಡಿ ಅದಕ್ಕೆ ಸಂಬಂಧಿಸಿದಂತೆ ದಾಳಿ ನಡೆಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ದೆಹಲಿಯ ಇ.ಡಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಿದ ಬಳಿಕ ಈ ಶೋಧ ನಡೆಯುತ್ತಿದೆ. ಇತ್ತೀಚೆಗೆ, ಸೋನಿಯಾ ಗಾಂಧಿಯವರನ್ನು 11 ಗಂಟೆ ಮತ್ತು ಕಳೆದ ತಿಂಗಳು ರಾಹುಲ್ ಗಾಂಧಿಯವರನ್ನು ಐದು ದಿನಗಳ ಕಾಲ ಸುಮಾರು 50 ಗಂಟೆ ವಿಚಾರಣೆಗೆ ಒಳಪಡಿಸಲಾಗಿತ್ತು.

ಏಪ್ರಿಲ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪವನ್ ಬನ್ಸಾಲ್ ಅವರನ್ನೂ ಇ.ಡಿ ಪ್ರಶ್ನೆ ಮಾಡಿತ್ತು.

ಕೇಂದ್ರ ದೆಹಲಿಯ ಐಟಿಒ ಬಳಿಯ ಬಹದ್ದೂರ್ ಷಾ ಜಾಫರ್ ಮಾರ್ಗ್‌ನಲ್ಲಿರುವ ಹೆರಾಲ್ಡ್ ಹೌಸ್ ಕಟ್ಟಡದಲ್ಲಿರುವ ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲೆ ದಾಳಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತದ ನಕಲಿ ಕಂಪನಿ ಮೇಲೂ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಸೇಡಿನ ರಾಜಕಾರಣ ಎಂದು ಕರೆದಿರುವ ಕಾಂಗ್ರೆಸ್ ನಾಯಕರು, ಯಾವುದೇ ಹಣದ ಅಕ್ರಮ ವರ್ಗಾವಣೆ ನಡೆದಿಲ್ಲ ಎಂದು ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.