ADVERTISEMENT

Amazon, Flipkart ವರ್ತಕರಿಂದ ನಿಯಮ ಉಲ್ಲಂಘನೆ ಆರೋಪ: 19 ಸ್ಥಳಗಳಲ್ಲಿ ಇ.ಡಿ ಶೋಧ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:27 IST
Last Updated 7 ನವೆಂಬರ್ 2024, 15:27 IST
   

ನವದೆಹಲಿ: ‘ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ’ (ಎಫ್‌ಇಎಂಎ) ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ, ಇ–ಕಾಮರ್ಸ್‌ ವೇದಿಕೆಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಮಾರಾಟಗಾರರಿಗೆ ಸಂಬಂಧಪಟ್ಟ ಬೆಂಗಳೂರು ಸೇರಿದಂತೆ 19 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಶೋಧ ನಡೆಸಿದೆ.

ಬೆಂಗಳೂರು ಜೊತೆಗೆ ದೆಹಲಿ, ಗುರುಗ್ರಾಮ, ಪಂಚಕುಲ(ಹರಿಯಾಣ), ಹೈದರಾಬಾದ್‌ಗಳಲ್ಲಿರುವ ಈ ‘ಪ್ರಮುಖ ಮಾರಾಟಗಾರರಿಗೆ’ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಆರು ಜನ ಮಾರಾಟಗಾರರಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿರುವ ಇ.ಡಿ ಅಧಿಕಾರಿಗಳು ಕೆಲವೆಡೆ ದಾಖಲೆಗಳ ನಕಲು ತೆಗೆದುಕೊಂಡಿದ್ದಾರೆ ಎಂದೂ ತಿಳಿಸಿವೆ.

ADVERTISEMENT

‘ಈ ಎರಡು ಪ್ರಮುಖ ಕಂಪನಿಗಳು ತಮ್ಮ ಮೂಲಕ ಮಾರಾಟವಾಗುವ ಸರಕುಗಳ ಮಾರಾಟ ದರಗಳ ಮೇಲೆ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಪ್ರಭಾವ ಬೀರುತ್ತಿವೆ. ತಮ್ಮ ಮೂಲಕ ವಸ್ತುಗಳನ್ನು ಮಾರಾಟ ಮಾಡುವ ಎಲ್ಲರಿಗೂ ಸಮಾನ ಅವಕಾಶ ಒದಗಿಸುವುದಿಲ್ಲ. ಆ ಮೂಲಕ ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಸುತ್ತಿವೆ’ ಎಂಬ ಬಗ್ಗೆ ಇ.ಡಿಗೆ ವ್ಯಾಪಕ ದೂರುಗಳು ಬಂದಿದ್ದವು. ಈ ಕಾರಣಕ್ಕೆ ಇ.ಡಿ ಶೋಧ ಕಾರ್ಯ ಕೈಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.

ಇ.ಡಿ ಕೈಗೊಂಡ ಈ ಕ್ರಮವನ್ನು ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ(ಸಿಎಐಟಿ) ಸ್ವಾಗತಿಸಿದೆ.

‘ಎಫ್‌ಇಎಂಎ ನಿಯಮಗಳ ಉಲ್ಲಂಘನೆಯಾಗುತ್ತಿರುವ ಕುರಿತು ಸಿಎಐಟಿ ಹಾಗೂ ಇತರ ವ್ಯಾಪಾರಿಗಳ ಸಂಘಗಳು ಹಲವು ವರ್ಷಗಳಿಂದ ದೂರು ನೀಡುತ್ತಿದ್ದವು. ಇ.ಡಿಯ ಕ್ರಮ ಈ ದಿಕ್ಕಿನಲ್ಲಿ ಇಟ್ಟಿರುವ ಸರಿಯಾದ ಹೆಜ್ಜೆ’ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿಯ ಬಿಜೆಪಿ ಸಂಸದ ಪ್ರವೀಣ್‌ ಖಂಡೇಲ್‌ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸಣ್ಣ ದಿನಸಿ ವರ್ತಕರಿಗೆ ಸಮಸ್ಯೆ ಉಂಟು ಮಾಡುವ ರೀತಿಯಲ್ಲಿ ಸ್ಪರ್ಧಾತ್ಮಕ ನೀತಿಗೆ ವಿರುದ್ಧವಾದ ವರ್ತನೆಗಾಗಿ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳಿಗೆ ಹಾಗೂ ಅವುಗಳ ಮೂಲಕ ಮಾರಾಟ ಮಾಡುವವರಿಗೆ ಭಾರತ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಕೂಡ ದಂಡ ವಿಧಿಸುವ ಕುರಿತ ನೋಟಿಸ್‌ಗಳನ್ನು ನೀಡಿತ್ತು ’ ಎಂದು ಅವರು ಹೇಳಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.