ನವದೆಹಲಿ: ದೆಹಲಿ ಜಲ ಮಂಡಳಿಯ ಹಗರಣ ಸಂಬಂಧ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾ. 18ರಂದು ವಿಚಾರಣೆಗೆ ಹಾಜರಾಗಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಭಾನುವಾರ ನೋಟಿಸ್ ಜಾರಿ ಮಾಡಿದೆ.
ಇದು ಕೇಜ್ರಿವಾಲ್ ವಿರುದ್ಧ ದಾಖಲಾಗಿರುವ ಎರಡನೇ ಹಣ ಅಕ್ರಮ ವರ್ಗಾವಣೆ ಪ್ರಕರಣವಾಗಿದೆ.
ದೆಹಲಿ ಅಬಕಾರಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಕೇಜ್ರಿವಾಲ್‌ಗೆ ಇ.ಡಿ. ಇದುವರೆಗೆ 8 ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗಳೆಲ್ಲವೂ ಕಾನೂನು ಬಾಹಿರ ಎಂದು ಹೇಳಿ ಎಂಟು ಬಾರಿಯೂ ವಿಚಾರಣೆಗೆ ಗೈರಾಗಿದ್ದರು.
ಒಂಬತ್ತನೇ ನೋಟಿಸ್ ಜಾರಿ ಮಾಡಿದ್ದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದು, ಮಾರ್ಚ್ 22ಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.
ಜಲ ಮಂಡಳಿ ಪ್ರಕರಣವು ‘ಸುಳ್ಳು’ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಅವರು ಪ್ರಚಾರ ಮಾಡುವುದನ್ನು ತಡೆಯಲು ಬಿಜೆಪಿಯ ಎರಡನೇ ಬ್ಯಾಕಪ್ ಎಂದು ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.