ನವದೆಹಲಿ:ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಸೋಮವಾರ ಹಾಜರಾದರು.
ಇ.ಡಿ. ಕಚೇರಿಯಲ್ಲಿ ರಾಹುಲ್ ಅವರನ್ನು ಬೆಳಿಗ್ಗೆ11.10ರಿಂದ ಮಧ್ಯಾಹ್ನ 2.10ರ ವರೆಗೆ ವಿಚಾರಣೆ ನಡೆಸಲಾಯಿತು. ಊಟಕ್ಕೆ ತೆರಳಿದ ರಾಹುಲ್ ಅವರು ಸೋನಿಯಾ ಗಾಂಧಿ ಅವರ ಆರೋಗ್ಯ ವಿಚಾರಿಸಿ ಮಧ್ಯಾಹ್ನ 3.30ಕ್ಕೆ ಇ.ಡಿ. ಕಚೇರಿಗೆ ಮರಳಿದರು. ಬಳಿಕ ವಿಚಾರಣೆ ಮುಂದುವರಿಸಲಾಯಿತು.
ಇ.ಡಿ. ವಿಚಾರಣೆ ವಿಚಾರವು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.
‘ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದೆ.
ವಿಚಾರಣೆಗೂ ಮುನ್ನ ರಾಹುಲ್ ಗಾಂಧಿ ಜತೆಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಮೆರವಣಿಗೆಯಲ್ಲಿ ಸಾಗಿ ‘ರಾಜಕೀಯ ಶಕ್ತಿ’ ಪ್ರದರ್ಶಿಸಿದರು.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತ್, ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಘೆಲ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ,ಪಿ. ಚಿದಂಬರಂ, ದಿಗ್ವಿಜಯ ಸಿಂಗ್, ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಸೇರಿದಂತೆ ಪಕ್ಷದ ಸಂಸದರು ಹಾಗೂ ಮುಖಂಡರುಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕಾಂಗ್ರೆಸ್‌ನ ಪ್ರತಿಭಟನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ‘ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಜೋಡೆತ್ತುಗಳು. ಭ್ರಷ್ಟಾಚಾರ ಪರವಾಗಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುತ್ತಿದೆ’ ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್‌ನ ಕೇಂದ್ರ ಕಚೇರಿ ಇರುವ ಅಲಿ ಅಕ್ಬರ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಕಚೇರಿಗೆ ಬರದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
ಕಾಂಗ್ರೆಸ್ ಕಚೇರಿಗೆ ಹೊರಟ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು.
ಶಾಂತಿಯುತ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ದೌರ್ಜನ್ಯದಿಂದಾಗಿ ಪಿ. ಚಿದಂಬರಂ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರು ಗಾಯಗೊಂಡರು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
‘ನಾನು ಹಾಗೂ ಮೂವರು ಸಂಸದರು ಪಕ್ಷದ ಕಚೇರಿಗೆ ಬೆಳಿಗ್ಗೆ ಹೊರಟಿದ್ದೆವು. ನಮ್ಮನ್ನು ತಡೆದ ಪೊಲೀಸರು, ಪಕ್ಷದ ಕಚೇರಿಗೆ ಬಿಡುವುದಾಗಿ ಹೇಳಿದರು. ಅವರು ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಸಂಜೆಯ ವರೆಗೂ ಕೂರಿಸಿಕೊಂಡರು. ಇದು ದೆಹಲಿ ಪೊಲೀಸರ ಕಾರ್ಯವೈಖರಿ’ಎಂದು ಪಕ್ಷದ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಕಿಡಿಕಾರಿದರು.
ದೇಶದಲ್ಲಿ ಸರ್ವಾಧಿಕಾರ: ‘ಕೈ’ ಕಿಡಿ
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ‘ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷದ ನಾಯಕರನ್ನು ಹಣಿಯುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಸರ್ವಾಧಿಕಾರ ಹಾಗೂ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಇದೆ’ ಎಂದು ಆರೋಪಿಸಿದೆ.
‘ಫ್ಯಾಸಿಸ್ಟ್‌ಗಳು ವಿರೋಧ ಪಕ್ಷಗಳನ್ನು ಇಷ್ಟ ಪಡುವುದಿಲ್ಲ. ಆದರೆ,ವಿರೋಧ ಪಕ್ಷ ಇದ್ದಾಗಲೇ ಪ್ರಜಾಪ್ರಭುತ್ವ ಕೆಲಸ ಮಾಡುತ್ತದೆ’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹಲೋತ್ ಹೇಳಿದರು.
‘ಬೆಲೆ ಏರಿಕೆ, ಹಣದುಬ್ಬರ, ಕೋಮುಗಲಭೆಯಂತಹ ಸೂಕ್ಷ್ಮ ವಿಚಾರಗಳನ್ನು ದೇಶವು ಎದುರಿಸುತ್ತಿರುವ ಸಂದರ್ಭದಲ್ಲೇ ಸರ್ಕಾರವು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಸಮಯ ವ್ಯರ್ಥ ಮಾಡುತ್ತಿದೆ’ ಎಂದರು.
ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಮಾತನಾಡಿ, ‘ಕಾಂಗ್ರೆಸ್‌ನ ಹಲವು ಕಾರ್ಯಕರ್ತರು ಶಾಂತಿಯತ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಕಾಂಗ್ರೆಸ್ ಕೇಂದ್ರ ಕಚೇರಿಗೆ ಹೋಗಲು ಅವರಿಗೆ ಅವಕಾಶ ನಿರಾಕರಿಸಲಾಯಿತು. ದೇಶದಲ್ಲಿಸರ್ವಾಧಿಕಾರಿ ಸರ್ಕಾರ ಇದೆ’ ಎಂದು ಕಿಡಿಕಾರಿದರು.
ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ , ‘ಕಾಂಗ್ರೆಸ್ ನಾಯಕರು ಯಾವುದೇ ತಪ್ಪು ಮಾಡಿಲ್ಲ. ಗೋಡ್ಸೆ ವಂಶಸ್ಥರು ಸತ್ಯವನ್ನು ಹೆದರಿಸುತ್ತಿದ್ದಾರೆ. ಅವರು ಇದರಲ್ಲಿ ಯಶಸ್ಸು ಗಳಿಸುವುದಿಲ್ಲ’ ಎಂದರು.
ಭ್ರಷ್ಟಾಚಾರದ ಪರ ಪ್ರತಿಭಟನೆ:ಸ್ಮೃತಿ ಇರಾನಿ
‘ಕಾಂಗ್ರೆಸ್ ನಾಯಕರು ಪ್ರತಿಭಟನೆಯ ಮೂಲಕ ಇ.ಡಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿಆರೋಪಿಸಿದರು.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕಾಂಗ್ರೆಸ್ ನಾಯಕರು ಭ್ರಷ್ಟಾಚಾರವನ್ನು ಬೆಂಬಲಿಸಲು ಮತ್ತು ₹2 ಸಾವಿರ ಕೋಟಿ ಮೌಲ್ಯದ ಆಸ್ತಿ ಕಬಳಿಸಲು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.
‘ದೇಶದಲ್ಲಿ ನ್ಯಾಯಕ್ಕಿಂತ ಯಾರೂ ಮೇಲಿಲ್ಲ. ರಾಹುಲ್ ಗಾಂಧಿ ಕೂಡ ಇದಕ್ಕೆ ಹೊರತಲ್ಲ. ಈ ಹಿಂದೆ ಯಾವುದೇ ರಾಜಕೀಯ ಪಕ್ಷಗಳು ತನಿಖಾ ಸಂಸ್ಥೆಯ ಮೇಲೆ ಒತ್ತಡ ಹೇರುವಂತಹ ಇಂತಹ ನೀಚ ಕೆಲಸ ಮಾಡಿರಲಿಲ್ಲ. ಇದು ಕೇವಲ ಕುಟುಂಬದ ಅಕ್ರಮ ಆಸ್ತಿ ರಕ್ಷಣೆಯ ಪ್ರಯತ್ನ’ ಎಂದು ಟೀಕಿಸಿದರು.
‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕಟಿಸುವ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ ₹ 2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಗಾಂಧಿ ಕುಟುಂಬ ಯತ್ನಿಸಿದೆ’ ಎಂದು ಆರೋಪಿಸಿರುವ ಇರಾನಿ, ‘ಕಂಪನಿಯಲ್ಲಿ 5 ಸಾವಿರಕ್ಕೂ ಹೆಚ್ಚಿನ ಸ್ವಾತಂತ್ರ್ಯ ಯೋಧರು ಷೇರುಗಳನ್ನು ಹೊಂದಿದ್ದರು. ಈಗ ಇಡೀ ಕಂಪನಿ ಗಾಂಧಿ ಕುಟುಂಬದ ಮಾಲೀಕತ್ವಕ್ಕೆ ಬಂದಿದೆ’ ಎಂದರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಆರ್ಥಿಕ ಅಪರಾಧ ಎಸಗಿರುವ ವ್ಯಕ್ತಿಯ ಪರವಾಗಿ ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್, ಪಿ.ಚಿದಂಬರಂ ಸೇರಿದಂತೆ ಹಲವು ನಾಯಕರು ಧ್ವನಿ ಎತ್ತಿದ್ದಾರೆ. ಸತ್ಯಾಗ್ರಹದ ಪರಿಕಲ್ಪನೆಯನ್ನು ಪುನರ್ ವ್ಯಾಖ್ಯಾನ ಮಾಡಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.