ADVERTISEMENT

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿಚಾರಣೆಗೆ ಇ.ಡಿ. ಹುಡುಕಾಟ

ಪಿಟಿಐ
Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್   

ನವದೆಹಲಿ/ರಾಂಚಿ: ಜಮೀನು ಅಕ್ರಮದ ಹಗರಣವೊಂದಕ್ಕೆ ಸಂಬಂಧಿಸಿದಂತೆ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ತಂಡವೊಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ದೆಹಲಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿತ್ತು. ತಂಡವು ಅಲ್ಲಿ 13 ತಾಸುಗಳವರೆಗೆ ಇತ್ತು.

ಆದರೆ ಸೊರೇನ್ ಅವರು ಅಲ್ಲಿ ಇರಲಿಲ್ಲ, ಅವರನ್ನು ಸಂಪರ್ಕಿಸಲು ಕೂಡ ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಇದನ್ನು ಸೊರೇನ್ ಕುಟುಂಬದ ಸದಸ್ಯರು ಅಲ್ಲಗಳೆದಿದ್ದಾರೆ. ಸೊರೇನ್ ಅವರು ತಮ್ಮ ಹೇಳಿಕೆಯನ್ನು ರಾಂಚಿಯ ನಿವಾಸದಲ್ಲಿ ಜನವರಿ 31ರಂದು ನೀಡಲು ಸಿದ್ಧರಿರುವುದಾಗಿ ಅಧಿಕಾರಿಗಳಿಗೆ ಮತ್ತೆ ಮತ್ತೆ ತಿಳಿಸಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.

ಇ.ಡಿ. ಅಧಿಕಾರಿಗಳು ದೆಹಲಿಯ ಸೊರೇನ್ ನಿವಾಸವನ್ನು ಬೆಳಿಗ್ಗೆ 9ರ ಸುಮಾರಿಗೆ ತಲುಪಿದರು. ಇ.ಡಿ.ಯ ಕೆಲವು ಅಧಿಕಾರಿಗಳು ರಾತ್ರಿ 10.30ರ ಸುಮಾರಿಗೆ ಅಲ್ಲಿಂದ ವಾಪಸ್ಸಾಗಿದ್ದಾರೆ. ಆದರೆ ಎಲ್ಲ ಅಧಿಕಾರಿಗಳೂ ಅಲ್ಲಿಂದ ವಾಪಸ್ಸಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ADVERTISEMENT

ಇ.ಡಿ. ಕಾರ್ಯಾಚರಣೆಯಿಂದ ಬೆದರಿರುವ ಸೊರೇನ್ ಅವರು ಕಳೆದ 18 ತಾಸುಗಳಿಂದ ತಲೆಮರೆಸಿಕೊಂಡಿದ್ದಾರೆ ಎಂದು ಜಾರ್ಖಂಡ್ ಬಿಜೆಪಿ ಘಟಕವು ಆರೋಪಿಸಿದೆ. ‘ಇದು ಜಾರ್ಖಂಡ್ ರಾಜ್ಯದ ಮರ್ಯಾದೆಯ ಪ್ರಶ್ನೆಯಾಗಿರುವ ಕಾರಣ ರಾಜ್ಯ‍‍ಪಾಲರು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದೆ.

‘ವಿಚಾರಣೆಗಾಗಿ ನಮ್ಮ ತಂಡವು ಮುಖ್ಯಮಂತ್ರಿಯವರ ನಿವಾಸಕ್ಕೆ ಬಂದಿದೆ. ಆದರೆ ಅವರು ಇಲ್ಲಿ ಇಲ್ಲ. ಇ.ಡಿ. ತಂಡವು ಜಾರ್ಖಂಡ್ ಭವನಕ್ಕೆ ಮತ್ತು ಇತರ ಕೆಲವು ಸ್ಥಳಗಳಿಗೆ ಕೂಡ ತೆರಳಿದೆ. ಆದರೆ ಅಲ್ಲಿ ಎಲ್ಲಿಯೂ ಮುಖ್ಯಮಂತ್ರಿ ಇಲ್ಲ’ ಎಂದು ಮೂಲಗಳು ಹೇಳಿವೆ.

ಈ ವಿಚಾರವಾಗಿ ಮುಖ್ಯಮಂತ್ರಿ ಕಚೇರಿ ಪ್ರತಿಕ್ರಿಯೆ ನೀಡಿಲ್ಲ. ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ಜಾರ್ಖಂಡ್ ರಾಜ್ಯಪಾಲ ರಾಧಾಕೃಷ್ಣನ್ ಹೇಳಿದ್ದಾರೆ. ಸಮಸ್ಯೆಯೊಂದು ನಿಜವಾಗಿಯೂ ಎದುರಾಗುವವರೆಗೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದಾರೆ.

ಈ ನಡುವೆ, ಜೆಎಂಎಂ ಕಾರ್ಯಕರ್ತರು ರಾಂಚಿಯಲ್ಲಿ ಭಾರಿ ರ್‍ಯಾಲಿ ನಡೆಸಿದರು. ಪಕ್ಷದ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸೊರೇನ್ ಅವರನ್ನು ಗುರಿಯಾಗಿಸಿಕೊಂಡು ಇ.ಡಿ. ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪಿಸಿದರು. 

‘ಮಾಧ್ಯಮ ಮೂಲಗಳ ಪ್ರಕಾರ, ಹೇಮಂತ್‌ ಅವರು ತಮ್ಮ ಮುಖವನ್ನು ಮುಚ್ಚಿಕೊಂಡು ದೆಹಲಿಯ ನಿವಾಸದಿಂದ ಪರಾರಿಯಾಗಿದ್ದಾರೆ. ಅವರ ಭದ್ರತಾ ಸಿಬ್ಬಂದಿ ಅಜಯ್ ಸಿಂಗ್ ಅವರೂ ನಾಪತ್ತೆಯಾಗಿದ್ದಾರೆ’ ಎಂದು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಆರೋಪಿಸಿದ್ದಾರೆ. ಇಬ್ಬರ ಫೋನ್‌ಗಳು ಸ್ವಿಚ್ ಆಫ್ ಆಗಿವೆ ಎಂದು ಮರಾಂಡಿ ಹೇಳಿದ್ದಾರೆ.

‘ಇಲ್ಲಿನ ಪರಿಸ್ಥಿತಿಯು ಹಿಂದೆಂದೂ ಕಾಣದಂಥದ್ದು. ಮುಖ್ಯಮಂತ್ರಿ ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ’ ಎಂದು ಜಾರ್ಖಂಡ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.