ನವದೆಹಲಿ: ಮಹಾರಾಷ್ಟ್ರದ ಪುಣೆಯಲ್ಲಿ ಹಿರಿಯ ಪತ್ರಕರ್ತ ನಿಖಿಲ್ ವಾಗ್ಳೆ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಭಾರತೀಯ ಸಂಪಾದಕರ ಒಕ್ಕೂಟವು ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಬಿಜೆಪಿಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಅಡ್ವಾಣಿ ಅವರ ವಿರುದ್ಧ ನಿಖಿಲ್ ವಾಗ್ಳೆ ನೀಡಿದ್ದಾರೆ ಎನ್ನಲಾದ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಅವರ ಕಾರಿನ ಮೇಲೆ ದಾಳಿ ನಡೆಸಿದ್ದರು.
ದಾಳಿಯನ್ನು ಖಂಡಿಸಿ ಪುಣೆಯ ಆಡಳಿತ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿರುವ ಒಕ್ಕೂಟವು, ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಪುಣೆಯ ವಿಶ್ರಾಮ್‌ಬಾಗ್ ಪೊಲೀಸ್ ಠಾಣೆಯಲ್ಲಿ ವಾಗ್ಳೆ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಕ್ಕೂ ಒಕ್ಕೂಟ ಕಳವಳ ವ್ಯಕ್ತಪಡಿಸಿದೆ. ‘ಪತ್ರಕರ್ತರನ್ನು ಬೆದರಿಸುವ ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಕಾನೂನಿನ ದುರುಪಯೋಗ ಮಾಡಲಾಗುತ್ತಿದೆ’ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಕಾನೂನು ಅನುಷ್ಠಾನ ಸಂಸ್ಥೆಗಳು ಸಂಯಮದಿಂದ ವರ್ತಿಸುವಂತೆ ಮತ್ತು ತನಿಖೆ ಪ್ರಕ್ರಿಯೆಯೇ ಶಿಕ್ಷೆಯಂತಾಗದಂತೆ ನೋಡಿಕೊಳ್ಳಲು ಒಕ್ಕೂಟ ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.