ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಬಂಧನಕ್ಕೊಳಗಾಗಿ ಜೈಲು ಸೇರಿರುವ ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರ ಜಾಮೀನು ಅರ್ಜಿಯ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು ಈ ಸಂಬಂಧ ಇ.ಡಿ ಗೆ ನೋಟಿಸ್ ಜಾರಿಗೊಳಿಸಿದೆ.
‘ಸತ್ಯೇಂದರ್ ಜೈನ್ ಅವರು ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠದ ಮೊರೆ ಹೋಗಬಹುದು. ಅದಕ್ಕೆ ಅವರು ಸ್ವತಂತ್ರರಿದ್ದಾರೆ’ ಎಂದು ನ್ಯಾಯಪೀಠ ಹೇಳಿತು.
ಸತ್ಯೇಂದರ್ ಜೈನ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ‘ಸತ್ಯೇಂದರ್ ಜೈನ್ ಅವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗಾಗಲೇ 35 ಕೆ.ಜಿ.ದೇಹ ತೂಕ ಕಳೆದುಕೊಂಡಿರುವ ಅವರು ಅಸ್ಥಿಪಂಜರದಂತೆ ಕಾಣುತ್ತಿದ್ದಾರೆ’ ಎಂದು ತಿಳಿಸಿದರು.
ಇ.ಡಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರು. ‘ಪ್ರಕರಣದಲ್ಲಿ ಈಗಾಗಲೇ ಕೇವಿಯಟ್ ಸಲ್ಲಿಸಲಾಗಿದೆ’ ಎಂದೂ ಹೇಳಿದರು.
ಈ ವರ್ಷದ ಏಪ್ರಿಲ್ 6ರಂದು ದೆಹಲಿ ಹೈಕೋರ್ಟ್, ಜೈನ್ ಅವರ ಜಾಮೀನು ಅರ್ಜಿ ವಜಾಗೊಳಿಸಿತ್ತು. ಅರ್ಜಿದಾರರು ಪ್ರಭಾವಿಗಳಾಗಿದ್ದು, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.