ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿರುವ ಜಾರಿ ನಿರ್ದೇಶನಾಲಯದ (ED) ತನಿಖೆಗೆ ಗೈರಾಗಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪತ್ತೆಗಾಗಿ ಅವರ ದೆಹಲಿ ನಿವಾಸದ ಎದುರು ಅಧಿಕಾರಿಗಳು ಕಾದು ಕುಳಿತಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖಂಡ ಸೊರೇನ್ ಜ. 27ರಂದು ರಾಂಚಿಯಿಂದ ದೆಹಲಿಗೆ ಪ್ರಯಾಣಿಸಿದ್ದರು. ಇದಕ್ಕೂ ಮೊದಲು EDಗೆ ಇಮೇಲ್ ಕಳುಹಿಸಿರುವ ಅವರು, ಜ. 31ರಂದು ಮಧ್ಯಾಹ್ನ 1ಕ್ಕೆ ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ವಿಚಾರಣೆ ಒಳಪಡಲು ಒಪ್ಪಿಗೆ ಸೂಚಿಸಿದ್ದರು ಎಂದೆನ್ನಲಾಗಿದೆ.
ದಕ್ಷಿಣ ದೆಹಲಿಯ ಶಾಂತಿನಿಕೇತನ ಕಟ್ಟಡದಲ್ಲಿರುವ ಸೊರೇನ್ ಮನೆಯ ಎದುರು ಪೊಲೀಸರೊಂದಿಗೆ ED ಅಧಿಕಾರಿಗಳು ಸೋಮವಾರ ಬೆಳಿಗ್ಗೆ 9ಕ್ಕೆ ಭೇಟಿ ನೀಡಿದರು. ಸಂಜೆಯವರೆಗೂ ಅವರು ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಮಾಧ್ಯಮದವರೂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
‘ಮುಖ್ಯಮಂತ್ರಿ ಅವರ ಮನೆಗೆ ವಿಚಾರಣೆಗಾಗಿ ಬಂದಿದ್ದೇವೆ. ಆದರೆ ಅವರು ಇಲ್ಲಿಲ್ಲ. ಜಾರ್ಖಂಡ್ ಭವನ ಸೇರಿದಂತೆ ಇನ್ನೂ ಹಲವೆಡೆ ED ತಂಡ ತೆರಳಿದೆ. ಆದರೆ ಮುಖ್ಯಮಂತ್ರಿ ಅವರ ಸುಳಿವಿಲ್ಲ’ ಎಂದು ಮೂಲಗಳು ಹೇಳಿವೆ.
ಈ ಮೊದಲು ಜ. 20ರಂದು ರಾಂಚಿಯಲ್ಲಿ ED ಸೊರೇನ್ ವಿಚಾರಣೆ ನಡೆಸಿತ್ತು. ಮುಂದಿನ ವಿಚಾರಣೆಯನ್ನು ಜ. 29 ಅಥವಾ 31ರಂದು ನಡೆಸುವುದಾಗಿ ಹಾಗೂ ಅದನ್ನು ಖಚಿತಪಡಿಸುವಂತೆ ಸೂಚಿಸಿತ್ತು. ಇದಕ್ಕೆ ಸೊರೇನ್ ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದರು ಎಂದು ಮೂಲಗಳು ಹೇಳಿವೆ.
ಈ ಎಲ್ಲಾ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿ ಕಚೇರಿ ಮೌನಕ್ಕೆ ಜಾರಿದೆ. ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದಾರೆ.
ರಾಂಚಿಯಲ್ಲಿರುವ ಮುಖ್ಯಮಂತ್ರಿ ಕಚೇರಿ ನಿವಾಸ, ರಾಜಭವನ ಮತ್ತು ಕೇಂದ್ರ ಸರ್ಕಾರದ ಕಚೇರಿಗಳಿಗೆ ಭದ್ರತೆ ಹೆಚ್ಚಿಸಲಾಗಿದೆ. ED ವಿರುದ್ಧ ಜೆಎಂಎಂ ಕಾರ್ಯಕರ್ತರು ರಾಂಚಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈವರೆಗೂ 14 ಜನರಲ್ಲಿ ಬಂಧಿಸಲಾಗಿದೆ. ಇದರಲ್ಲಿ 2011ರ ತಂಡದ ಐಎಎಸ್ ಅಧಿಕಾರಿ ಛಾವಿ ರಂಜನ್ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.