ನವದೆಹಲಿ/ಬೆಂಗಳೂರು: ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ (ಕೋಚಿಮುಲ್) ನಡೆದಿದೆ ಎನ್ನಲಾದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವುದು ಹಾಗೂ ಸ್ವತಂತ್ರ ತನಿಖೆ ನಡೆಸುವ ಕುರಿತು ಕರ್ನಾಟಕ ರಾಜ್ಯಪಾಲರು ಹಾಗೂ ಲೋಕಾಯುಕ್ತಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಪತ್ರ ಬರೆದಿದೆ.
ನೇಮಕಾತಿ ಹಗರಣಕ್ಕೆ ಸಂಬಂಧಿಸಿ, ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕರೂ ಆದ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪ ಕುರಿತು ತನಿಖೆ ನಡೆಸುವ ಸಂಬಂಧ ಇ.ಡಿ ಈ ಪತ್ರ ಬರೆದಿದೆ ಎಂದು ಮೂಲಗಳು ಹೇಳುತ್ತವೆ.
‘ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು ₹150 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಭಾಗವಾಗಿ ನಂಜೇಗೌಡ ಹಾಗೂ ಅವರ ಆಪ್ತರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಜನವರಿಯಲ್ಲಿ ಶೋಧ ನಡೆಸಿತ್ತು. ಈ ಶೋಧದ ವೇಳೆ, ‘ನೌಕರಿಗಾಗಿ ಹಣ’ ಜಾಲವನ್ನು ಇ.ಡಿ ಪತ್ತೆ ಹಚ್ಚಿತ್ತು ಎಂದು ಇವೇ ಮೂಲಗಳು ಹೇಳಿವೆ.
ಮಂಗಳೂರು ವಿಶ್ವವಿದ್ಯಾಲಯದ ಮೂಲಕ ಲಿಖಿತ ಪರೀಕ್ಷೆ ನಡೆಸಿ, ಒಕ್ಕೂಟದಲ್ಲಿ ಖಾಲಿ ಇರುವ 81 ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಕೋಚಿಮುಲ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಿತ್ತು.
ಲಿಖಿತ ಪರೀಕ್ಷೆ ನಂತರ, ಸಂದರ್ಶನ ನಡೆಸುವುದಕ್ಕಾಗಿ ಕೋಚಿಮುಲ್ ಅಧ್ಯಕ್ಷರೂ ಆದ ಶಾಸಕ ನಂಜೇಗೌಡ ನೇತೃತ್ವದಲ್ಲಿ ನೇಮಕಾತಿ ಸಮಿತಿ ರಚಿಸಲಾಗಿತ್ತು. ಕೋಚಿಮುಲ್ ನಿರ್ದೇಶಕ ಕೆ.ಎನ್.ನಾಗರಾಜ, ಸಹಕಾರ ಇಲಾಖೆಯ ಹೆಚ್ಚುವರಿ ರಿಜಿಸ್ಟ್ರಾರ್ ಲಿಂಗರಾಜು, ಕೆಎಂಎಫ್ ಪ್ರತಿನಿಧಿ ಬಿ.ಪಿ.ರಾಜು ಹಾಗೂ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಮೂರ್ತಿ ಈ ಸಮಿತಿಯಲ್ಲಿದ್ದರು.
‘ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಸಂದರ್ಶನಕ್ಕೆ 320 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಪೈಕಿ, 75 ಅಭ್ಯರ್ಥಿಗಳಿದ್ದ ಅಂತಿಮ ಪಟ್ಟಿಗೆ ಕೋಚಿಮುಲ್ ಆಡಳಿತ ಮಂಡಳಿ ಅನುಮೋದನೆ ನೀಡಿತ್ತು. ಆದರೆ, ಫಲಿತಾಂಶ ಪ್ರಕಟಿಸದೇ, ಈ ಅಭ್ಯರ್ಥಿಗಳನ್ನು ತರಬೇತಿಗೆ ಕಳುಹಿಸಲಾಗಿತ್ತು’ ಎಂದು ಇ.ಡಿ ಹೇಳಿದೆ.
ಇ.ಡಿ ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.