ADVERTISEMENT

ಪಕ್ಷ, ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಎಪಿ ಸಚಿವ ರಾಜಕುಮಾರ್‌ ಆನಂದ್‌ 

ಪಿಟಿಐ
Published 10 ಏಪ್ರಿಲ್ 2024, 11:45 IST
Last Updated 10 ಏಪ್ರಿಲ್ 2024, 11:45 IST
<div class="paragraphs"><p>ರಾಜಕುಮಾರ್‌ ಆನಂದ್‌&nbsp;</p></div>

ರಾಜಕುಮಾರ್‌ ಆನಂದ್‌ 

   

ನವದೆಹಲಿ: ದೆಹಲಿ ಸಚಿವ ರಾಜಕುಮಾರ್ ಆನಂದ್ ಅವರು ತಮ್ಮ ಹುದ್ದೆಗೆ ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ಘೋಷಿಸಿದ್ದಾರೆ.

‘ಪಕ್ಷವು ಭ್ರಷ್ಟಾಚಾರದಲ್ಲಿ ಮುಳುಗಿದೆ ಹಾಗೂ ದಲಿತರನ್ನು ಕಡೆಗಣಿಸುತ್ತಿದೆ’ ಎಂದು ಟೀಕಿಸಿದ ಬೆನ್ನಲ್ಲೇ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ADVERTISEMENT

ಲೋಕಸಭಾ ಚುನಾವಣೆ ಕಣ ಕಾವೇರುತ್ತಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್‌, ನಾಯಕರಾದ ಮನೀಷ್‌ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್‌ ಜೈಲಿನಲ್ಲಿದ್ದಾರೆ. ಪಕ್ಷವು ಸಂಕಷ್ಟ ಎದುರಿಸುತ್ತಿರುವ ಈ ಸಮಯದಲ್ಲಿಯೇ, ರಾಜಕುಮಾರ್‌ ಆನಂದ್‌ ಅವರು ರಾಜೀನಾಮೆ ನೀಡಿದ್ದಾರೆ.

ಅಲ್ಲದೇ, ಏಪ್ರಿಲ್‌ 14ರಂದು ‘ಸಂವಿಧಾನ ಉಳಿಸಿ, ಸರ್ವಾಧಿಕಾರ ತೊಲಗಿಸಿ ದಿನ’ ಎಂದು ಹಮ್ಮಿಕೊಳ್ಳುವುದಾಗಿ ಎಎಪಿ ಘೋಷಿಸಿದ ದಿನವೇ, ರಾಜಕುಮಾರ್‌ ಆನಂದ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿರುವುದು ಗಮನಾರ್ಹ. ಅವರು ಕೇಂದ್ರ ದೆಹಲಿಯ ಪಟೇಲ್‌ ನಗರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು.

ದಿಢೀರ್‌ನೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ಕುರಿತು ಮಾಹಿತಿ ನೀಡಿದ ರಾಜಕುಮಾರ್‌ ಆನಂದ್‌,‘ಎಎಪಿ ಭ್ರಷ್ಟ ಪಕ್ಷವಾಗಿದೆ. ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲ. ಅಲ್ಲದೇ, ದಲಿತ ಸಮುದಾಯಕ್ಕೆ ಸೇರಿದ ಶಾಸಕರು ಮತ್ತು ಪಾಲಿಕೆ ಸದಸ್ಯರಿಗೆ ಗೌರವವನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ರಾಜಕಾರಣವನ್ನು ಬದಲಿಸುವ ಭರವಸೆಯೊಂದಿಗೆ ಆಮ್‌ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂತು. ಆದರೆ, ಬದಲಾದದ್ದು ಮಾತ್ರ ಪಕ್ಷದ ನಾಯಕರು. ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಹುಟ್ಟಿಕೊಂಡಂತಹ ಪಕ್ಷವೇ ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ನನ್ನ ಹೆಸರು ಇಂತಹ ಪಕ್ಷದೊಂದಿಗೆ ನಂಟು ಹೊಂದುವುದು ನನಗೆ ಬೇಡವಾಗಿದೆ’ ಎಂದರು.

‘ಪಕ್ಷದ ಉನ್ನತ ಸ್ಥಾನಗಳಲ್ಲಿ ದಲಿತರು ಇಲ್ಲ. ಭಾರಿ ವೇತನವಿರುವ ಹುದ್ದೆಗಳಿಗೆ ಇತ್ತೀಚೆಗೆ ನೇಮಕಾತಿ ನಡೆಯಿತು. ಅಲ್ಲಿ ಕೂಡ ಒಬ್ಬನೇ ಒಬ್ಬ ದಲಿತನನ್ನು ನೇಮಕ ಮಾಡಲಾಗಿಲ್ಲ. ನಾನು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂಬ ಭಾವನೆ ಮೂಡುತ್ತಿದೆ’ ಎಂದು ಹೇಳಿದರು.

‘ಇಲ್ಲಿ (ದೆಹಲಿ ಅಬಕಾರಿ ನೀತಿ) ಪ್ರಮಾದವಾಗಿದೆ ಎಂದು ದೆಹಲಿ ಹೈಕೋರ್ಟ್‌ ನಿನ್ನೆ ಸ್ಪಷ್ಟವಾಗಿ ಹೇಳಿದೆ. ಇಲ್ಲಿ ತಪ್ಪು ಇದೆ’ ಎಂದರು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷಗಳು, ಮುಂಬರುವ ದಿನಗಳಲ್ಲಿ ಎಎಪಿಯ ದೆಹಲಿ ಮತ್ತು ಪಂಜಾಬ್‌ ಘಟಕದ ಹಲವು ಮುಖಂಡರು ಪಕ್ಷ ತೊರೆಯಲಿದ್ದಾರೆ ಎಂದು ಹೇಳಿದ್ದಾರೆ.

ರಾಜಕುಮಾರ್‌ ಆನಂದ್ ಅವರು ಆಮದು ಮಾಡಿಕೊಂಡಿದ್ದ ಸರಕುಗಳಿಗೆ ಸಂಬಂಧಿಸಿ ಅಂದಾಜು ₹7 ಕೋಟಿಯಷ್ಟು ಕಸ್ಟಮ್ಸ್‌ ಸುಂಕವನ್ನು ಪಾವತಿಸಬೇಕಿತ್ತು. ಇದನ್ನು ತಪ್ಪಿಸುವ ಸಲುವಾಗಿ ತಪ್ಪು ಮಾಹಿತಿ ನೀಡಿದ್ದರು ಎಂಬ ಆರೋಪವನ್ನು ರಾಜಕುಮಾರ್‌ ಆನಂದ್ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ, ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವರಿಗೆ ಸೇರಿದ ಸ್ಥಳಗಳಲ್ಲಿ ಸುಮಾರು 23 ಗಂಟೆಗಳ ಕಾಲ ಶೋಧ ನಡೆಸಿದ್ದರು.

‘ಜೈಲು ಸೇರುವ ಭಯದಿಂದ ರಾಜೀನಾಮೆ’

‘ಕೆಲ ತಿಂಗಳುಗಳ ಹಿಂದೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ಜೈಲು ಸೇರುವ ಭಯದಿಂದ ಆನಂದ್ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಎಎಪಿ ಹೇಳಿದೆ. 

‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಪಕ್ಷವನ್ನು ಒಡೆಯಲು ಹಾಗೂ ನಾಶ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂಬ ತನ್ನ ಆರೋಪಗಳಿಗೆ ಆನಂದ್‌ ರಾಜೀನಾಮೆ ನೀಡಿರುವುದು ಪ್ರತ್ಯಕ್ಷ ಪುರಾವೆಯಾಗಿದೆ’ ಎಂದೂ ಎಎಪಿ ಹೇಳಿದೆ. ‍‘ಕೇಂದ್ರ ಸರ್ಕಾರದಿಂದ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಆನಂದ್‌ ಅವರಿಗೆ ಸಾಧ್ಯವಾಗಿಲ್ಲ’ ಎಂದಿರುವ ಎಎಪಿ, ‘ಶೀಘ್ರವೇ ಅವರು ಬಿಜೆಪಿ ಸೇರುವರು’ ಎಂದಿದೆ.  ಎಎಪಿಯ ಈ ಹೇಳಿಕೆಗಳನ್ನು ರಾಜ್‌ಕುಮಾರ್ ಆನಂದ್‌ ಅಲ್ಲಗಳೆದಿದ್ದಾರೆ.

ಅಗ್ನಿಪರೀಕ್ಷೆ ಕಾಲ: ಸಂಜಯ್‌ ಸಿಂಗ್

ರಾಜ್‌ಕುಮಾರ್‌ ಆನಂದ್‌ ಅವರು ಸಚಿವ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಎಎಪಿ ಮುಖಂಡ ಸಂಜಯ್‌ ಸಿಂಗ್‌,‘ಇದು ಪಕ್ಷದ ಸಚಿವರು ಹಾಗೂ ಶಾಸಕರಿಗೆ ಅಗ್ನಿಪರೀಕ್ಷೆ ಕಾಲ. ಒತ್ತಡ ಸಹಿಸಲಾರದೇ ಕೆಲವು ಪಕ್ಷದ ತೊರೆಯುತ್ತಿರುವುದು ಗೊತ್ತು. ಆದರೆ, ಕೆಲವೇ ಜನರು ಪಕ್ಷದಲ್ಲಿದ್ದು ಹೋರಾಟ ನಡೆಸುತ್ತೇವೆ’ ಎಂದರು.

ಸಚಿವ ಸೌರಭ್‌ ಭಾರದ್ವಾಜ್,‘ರಾಜ್‌ಕುಮಾರ್‌ ಹೆದರಿದ್ದಾರೆ ಎಂಬುದು ಗೊತ್ತು. ಹೀಗಾಗಿ ಅವರನ್ನು ಮೋಸಗಾರ ಎಂದು ಕರೆಯುವುದಿಲ್ಲ’ ಎಂದರು.

‘ಅವರಿಗೆ ಕುಟುಂಬ ಇದೆ, ಬಂಧು–ಬಳಗ ಇದೆ. ವರ್ಷಗಟ್ಟಲೇ ತಿಹಾರ್‌ ಜೈಲಿನಲ್ಲಿರುವುದು ಅವರಿಗೂ ಬೇಕಾಗಿಲ್ಲ. ಹೀಗಾಗಿ, ಅವರ ವಿರುದ್ಧ ನಾವು ಏನೂ ಹೇಳುವುದಿಲ್ಲ’ ಎಂದು ಭಾರದ್ವಾಜ್‌ ಪ್ರತಿಕ್ರಿಯಿಸಿದರು. ‘ಒಬ್ಬ ದಲಿತ ಹಾಗೂ ದಲಿತ ಸಚಿವರಿಗೆ ಬೆದರಿಕೆ ಹಾಕಬಹುದು ಅಂದರೆ, ಒಬ್ಬ ಸಾಮಾನ್ಯ ಮನುಷ್ಯನಿಗೆ ಏನಾಗಬಹುದು’ ಎಂದು ಪ್ರಶ್ನಿಸಿದ ಅವರು, ‘ಎಲ್ಲರೂ ಸಂಜಯ್‌ ಸಿಂಗ್ ಆಗಲು ಸಾಧ್ಯ ಇಲ್ಲ. ಇಲ್ಲಿರುವ ಮುಖ್ಯ ಅಂಶವೆಂದರೆ ಯಾರೂ ಹೆದರಬಾರದು ಅಷ್ಟೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.