ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆ ಆಗುವ ಮುನ್ನವೇ ಕಾವು ಏರುತ್ತಿದೆ. ಇಲ್ಲಿನ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಚಾರವನ್ನು ಈಗಾಗಲೇ ಆರಂಭಿಸಿವೆ. ಈ ಬಾರಿ ಎಎಪಿ, ಕೆಎಸ್‌ಆರ್, ಕೆಆರ್‌ಪಿಪಿಯಂತಹ ಹೊಸ ಪಕ್ಷಗಳು ಕಣಕ್ಕೆ ಇಳಿಯಲಿವೆ. ಈ ಪಕ್ಷಗಳು ಚುನಾವಣೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ಅವಲೋಕನ ಇಲ್ಲದೆ
–––––––––––––
ಕಲಬುರಗಿ/ಬಳ್ಳಾರಿ: ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್‌ಪಿಪಿ ಅಭ್ಯರ್ಥಿಗಳು ಸ್ಪರ್ಧಿಸುವರು. ಗಂಗಾವತಿಯಿಂದ ಜನಾರ್ದನ ರೆಡ್ಡಿ, ಕನಕಗಿರಿ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರದಿಂದ ಡಾ. ಚಾರೂಲ್ ವೆಂಕಟರಮಣ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಜನಾರ್ದನರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಣಕ್ಕಿಳಿಯುವ ಸಾಧ್ಯತೆ ಇದೆ.
ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ನಗರದಿಂದ ಜನಾರ್ದನರೆಡ್ಡಿ ಸಹೋದರ, ಹಾಲಿ ಶಾಸಕ ಸೋಮಶೇಖರರೆಡ್ಡಿ ಅವರ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಬಾವ ಮತ್ತು ಸೊಸೆ ನಡುವಿನ ಸ್ಪರ್ಧೆ ಏರ್ಪಟ್ಟರೆ ಚುನಾವಣೆಗೆ ರಂಗು ಬರಲಿದ್ದು, ರಾಜ್ಯದ ಕೆಲವೇ ಪ್ರತಿಷ್ಠಿತ ಕಣಗಳಲ್ಲಿ ಇದೂ ಒಂದಾಗಲಿದೆ.
ಬಳ್ಳಾರಿ, ವಿಜಯನಗರ ಹೊರತುಪಡಿಸಿ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ರೆಡ್ಡಿ ಪ್ರವಾಸ ಕೈಗೊಂಡಿದ್ದಾರೆ. ಹಾಲಿ ಮತ್ತು ಮಾಜಿ ಶಾಸಕರು ಅಲ್ಲದೇ ಪ್ರಮುಖರು, ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಇದರ ಪರಿಣಾಮ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತೊರೆದು ಕೆಲವರು ಕೆಆರ್‌ಪಿಪಿ ಸೇರುತ್ತಿದ್ದಾರೆ.
ಗಂಗಾವತಿಯಲ್ಲಿ ಕಾಂಗ್ರೆಸ್ ಬಣ ರಾಜಕೀಯದಿಂದ ರೆಡ್ಡಿಗೆ ಲಾಭವಾಗುವ ಸಾಧ್ಯತೆ ಇದೆ. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಮತ್ತು ಮಲ್ಲಿಕಾರ್ಜುನ ನಾಗಪ್ಪ ಟಿಕೆಟ್‌ಗಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪೈಪೋಟಿ ಏರ್ಪಟ್ಟಿದೆ. ಗಂಗಾವತಿಯ ಹಾಲಿ ಶಾಸಕ ಪರಣ್ಣ ಮುನವಳ್ಳಿ ವಿರೋಧದ ಅಲೆ, ಕಾಂಗ್ರೆಸ್‌ನಲ್ಲಿನ ತಿಕ್ಕಾಟ ರೆಡ್ಡಿಗೆ ಲಾಭವಾಗುವ ಸಾಧ್ಯತೆ ಅಧಿಕವಾಗಿದೆ.
ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು ಜಿಲ್ಲೆಯಲ್ಲಿ ಕೆಆರ್‌ಪಿಪಿಯ ಪ್ರಭಾವ ಇಲ್ಲ. ಆದರೆ ಭರವಸೆಗಳ ಮಹಾಪೂರ ಹರಿಸಿ, ಸಮಾವೇಶ, ರೋಡ್ ಶೋಗಳನ್ನು ನಡೆಸಿ, ಪ್ರಭಾವ ಬೀರಲು ಜನಾರ್ದನ ರೆಡ್ಡಿ ಪ್ರಯತ್ನ ನಡೆಸಿದ್ದಾರೆ.
ಬಿಆರ್‌ಎಸ್ ಪ್ರಭಾವ ಅಲ್ಪ
ನೆರೆಯ ತೆಲಂಗಾಣದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಏರಿರುವ ಕೆ.ಚಂದ್ರಶೇಖರರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್) ತನ್ನ ನೆಲೆ ವಿಸ್ತರಿಸಿಕೊಳ್ಳುವ ಪ್ರಯತ್ನದಲ್ಲಿದೆ. ಹಾಗಾಗಿಯೇ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಎಂದು ಹೆಸರು ಬದಲಿಸಲಾಗಿದೆ. ಆದರೆ ಈ ಬಾರಿ ಬಿಆರ್‌ಎಸ್ ಕರ್ನಾಟಕದಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಜೆಡಿಎಸ್‌ಗೆ ಬೆಂಬಲ ಘೋಷಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಯಾದಗಿರಿ, ಬೀದರ್ ಮತ್ತು ರಾಯಚೂರು, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಚಿಂತಾಕಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕೆಲವು ಗ್ರಾಮಗಳು ತೆಲಂಗಾಣ ರಾಜ್ಯದ ಗಡಿಗೆ ಹೊಂದಿಕೊಂಡಿವೆ. 30 ಗ್ರಾಮಗಳಲ್ಲಿ ತೆಲುಗು ಭಾಷಿಕರಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕೆಲ ಗ್ರಾಮಗಳು ಕೂಡ ತೆಲಂಗಾಣದ ಗಡಿಗೆ ತಾಗಿಗೊಂಡಿವೆ. ವ್ಯವಹಾರಕ್ಕೆ ಗ್ರಾಮಸ್ಥರು ಹೈದರಾಬಾದ್, ನಾರಾಯಣಪೇಟ ಅವಲಂಬಿಸಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ಮತ್ತು ಚಿಂಚೋಳಿ ತಾಲ್ಲೂಕಿನ ಕೆಲ ಗ್ರಾಮಗಳು ತೆಲಂಗಾಣ ರಾಜ್ಯಕ್ಕೆ ಹೊಂದಿಕೊಂಡಿವೆ. ಆದರೆ ಇಲ್ಲೆಲ್ಲೂ ಬಿಆರ್‌ಎಸ್ ಪಕ್ಷದ ಪ್ರಭಾವ ಇಲ್ಲ. ಪ್ರಭಾವಿ ನಾಯಕರೂ ಇಲ್ಲ. ಪಕ್ಷ ಸಂಘಟನೆ ನಡೆದಿಲ್ಲ. ಹಾಗಾಗಿ, ಬಿಆರ್‌ಎಸ್ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮ ಬೀರದು.
ಪೈಪೋಟಿಗೆ ಎಎಪಿ, ಕೆಎಸ್‌ಆರ್ ಸಿದ್ಧತೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಪೈಪೋಟಿ ನೀಡಲು ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕರ್ನಾಟಕ ರಾಷ್ಟ್ರ ಸಮಿತಿ (ಕೆಎಸ್‌ಆರ್) ಪಕ್ಷಗಳು ಸಜ್ಜಾಗುತ್ತಿವೆ. ಪರ್ಯಾಯ ರಾಜಕಾರಣದ ಮಾದರಿಗಳನ್ನು ಮುಂದಿಟ್ಟು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬದಲಿಗೆ ತಮ್ಮನ್ನು ಬೆಂಬಲಿಸುವಂತೆ ಜನರ ಎದುರು ಹೋಗಲು ಈ ಎರಡೂ ಪಕ್ಷಗಳು ಸಿದ್ಧತೆ ನಡೆಸಿವೆ.
ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಎಪಿ ನಾಯಕರು ಹೇಳುತ್ತಿದ್ದಾರೆ. ಪಕ್ಷಕ್ಕೆ ಹೆಚ್ಚಿನ ಸದಸ್ಯಬಲ ಇಲ್ಲದಿದ್ದರೂ ದೆಹಲಿ ಮಾದರಿಯಲ್ಲಿ ಹೊಸ ಪ್ರಯೋಗ ಮಾಡಿ ಯಶಸ್ಸು ಪಡೆಯುತ್ತೇವೆ ಎಂಬುದು ಅವರ ಯೋಚನೆ. ಬೆಂಗಳೂರು ನಗರದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತಗಳನ್ನು ಕೀಳಲು ಎಎಪಿ ಮುಖಂಡರು ಕಸರತ್ತು ನಡೆಸುತ್ತಿದ್ದಾರೆ.
‘ಹಣ, ಜಾತಿ, ಧರ್ಮ ಅಥವಾ ತೋಳ್ಬಲವನ್ನು ನಂಬಿ ನಮ್ಮ ಪಕ್ಷ ಚುನಾವಣೆ ಎದುರಿಸುವುದಿಲ್ಲ. ಜನರ ಆಯ್ಕೆಯ ಪರ್ಯಾಯ ಮಾದರಿಯೇ ನಮ್ಮ ಶಕ್ತಿ. ಅದರ ಮೂಲಕವೇ ಎಲ್ಲ ಕ್ಷೇತ್ರಗಳಲ್ಲೂ ಚುನಾವಣೆ ಎದುರಿಸುತ್ತೇವೆ’ ಎನ್ನುತ್ತಾರೆ ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ.
20 ಕ್ಷೇತ್ರಗಳಲ್ಲಿ ಪ್ರಬಲ ಹೋರಾಟ
ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ನಿಶ್ಚಿತ. ಆದರೆ, ಆಯ್ದ 20 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಪ್ರಬಲ ಹೋರಾಟ ನಡೆಸಲಿದೆ. ತುಮಕೂರು ನಗರ, ಕುಣಿಗಲ್, ಅರಕಲಗೂಡು, ಅರಸೀಕೆರೆ, ಕೆ.ಆರ್. ಪುರ, ಬೆಂಗಳೂರು ದಕ್ಷಿಣ, ಚಾಮುಂಡೇಶ್ವರಿ ಕ್ಷೇತ್ರಗಳು ಈ ಪಟ್ಟಿಯಲ್ಲಿವೆ ಎನ್ನುತ್ತಾರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು.
‘ರಾಜ್ಯದ ಎಲ್ಲ ಕಡೆಗಳಲ್ಲೂ ನಮ್ಮ ಪಕ್ಷವನ್ನು ಜನರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ನಮ್ಮ ಭರವಸೆಗಳಲ್ಲಿ ಅವರಿಗೆ ನಂಬಿಕೆ ಇದೆ. ಹಲವು ಕ್ಷೇತ್ರಗಳಲ್ಲಿ ಕೆಆರ್‌ಎಸ್ ಈ ಬಾರಿ ಪ್ರಬಲ ಪೈಪೋಟಿ ನೀಡುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದು ಹೇಳುತ್ತಾರೆ ಕೆಆರ್‌ಎಸ್ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ.
––––––––––
ಜನ ನುಡಿ
ಕಾಳಜಿಯ ನಾಯಕ ಬೇಕು
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಪ್ರಜಾಪ್ರಭುತ್ವದ ಬುನಾದಿಯಾಗಿ ಮತ್ತು ಅಭಿವೃದ್ಧಿಗೆ ಪೂರಕವಾಗಿ ಚುನಾವಣೆಗಳು ನಡೆಯಬೇಕು. ಸೂಕ್ತ ಮತ್ತು ಅರ್ಹ ಜನಪ್ರತಿನಿಧಿ ಪರ ಮತ ಚಲಾವಣೆ ಆಗಬೇಕೆ ಹೊರತು ಮತ ಮಾರಾಟವಾಗಬಾರದು. ಅಬ್ಬರದ ಪ್ರಚಾರ ಮಾಡಿ, ಭರವಸೆಗಳನ್ನು ಮಾತಿಗಷ್ಟೇ ಸೀಮಿತ ಮಾಡುವ ಅಭ್ಯರ್ಥಿಯ ಬದಲು ಜನರ ಪರ ನೈಜ ಕಾಳಜಿಯುಳ್ಳ ಮತ್ತು ಸಮಸ್ಯೆಗಳಿಗೆ ಸ್ಪಂದಿಸಬಲ್ಲ ನಾಯಕನನ್ನು ಆಯ್ಕೆ ಮಾಡಬೇಕು. ಜಾತಿ, ಮತ, ಧರ್ಮ, ಸಮುದಾಯಕ್ಕಿಂತ ಸರ್ವರ ಏಳ್ಗೆ ಮತ್ತು ಕ್ಷೇತ್ರದ ಅಭಿವೃದ್ಧಿ ಆದ್ಯತೆ ಆಗಬೇಕು.
ವೀರೇಶ ಪುಟಪಾಕ, ಉಪನ್ಯಾಸಕ, ಯಾದಗಿರಿ
ಅರಿವು ಮೂಡಿಸಿ
ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಗೌರವ ಇದೆ. ಆದರೆ, ಕೆಲವರಿಗೆ ಚುನಾವಣೆ ಎಂದರೆ ಭ್ರಷ್ಟಾಚಾರ, ಹಣ ಹಂಚಿಕೆ ಮಾಡುವ ಸಂದರ್ಭ ಎಂಬ ತಪ್ಪು ಭಾವನೆ ಇದೆ. ನಾವು ಯಾವುದೇ ಆಮಿಷಕ್ಕೆ ಒಳಗಾಗದೆ, ನಮ್ಮ ಹಕ್ಕು ಚಲಾಯಿಸಲು ಇರುವ ಅವಕಾಶ ಚುನಾವಣೆ. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬಹುದು. ಯುವಜನರಿಗಿಂತ ಹೆಚ್ಚಾಗಿ, ಹಲವು ಹಿರಿಯರಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸುವ, ತಪ್ಪು ತಿಳಿವಳಿಕೆ ನಿವಾರಿಸುವ ಅಗತ್ಯವಿದೆ.
ಸುಸ್ಮಿತಾ, ಎಂ.ಕಾಂ ವಿದ್ಯಾರ್ಥಿನಿ, ಮಂಗಳೂರು
ಆರೋಗ್ಯ, ಶಿಕ್ಷಣದ ವಿಚಾರದಲ್ಲಿ ನಿರ್ಲಕ್ಷ್ಯ
ಬಡವರು, ಮಧ್ಯಮ ವರ್ಗದ ಕುಟುಂಬಗಳು ತಮ್ಮ ದುಡಿಮೆಯ ಬಹುಪಾಲು ಹಣವನ್ನು ಆರೋಗ್ಯ ಮತ್ತು ಶಿಕ್ಷಣಕ್ಕೆ ವೆಚ್ಚ ಮಾಡುತ್ತಿವೆ. ಹೀಗಾದರೆ ಉತ್ತಮ ಜೀವನ ಹೇಗೆ ಸಾಧ್ಯ? ಆರೋಗ್ಯ, ಶಿಕ್ಷಣ ಸೇರಿದಂತೆ ಜನರಿಗೆ ಮೂಲ ಅಗತ್ಯಗಳನ್ನು ಕಲ್ಪಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ಸರ್ಕಾರಗಳ ಕರ್ತವ್ಯ. ಇಷ್ಟು ಸೌಲಭ್ಯ ಕಲ್ಪಿಸಿದರೆ ಜನರ ಬದುಕು ಹಸನಾಗುತ್ತದೆ. ಆದರೆ, ನಾವೇ ಆಯ್ಕೆ ಮಾಡಿಕೊಳ್ಳುತ್ತಿರುವ ಸರ್ಕಾರಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿವೆ.
ಮಹಿಳೆಯರು ಸರ್ಕಾರಗಳನ್ನು ಬದಲಿಸುವಷ್ಟು ಶಕ್ತಿ ಹೊಂದಿದ್ದಾರೆ. ಮನೆಗಳನ್ನಷ್ಟೇ ಅಲ್ಲ ಚುನಾವಣಾ ವ್ಯವಸ್ಥೆಗಳನ್ನೂ ಮಹಿಳೆಯರು ಬದಲಿಸಬಹುದು. ರಾಜಕೀಯದವರು ನೀಡುವ ಉಡುಗೊರೆಗಳು, ಅವರು ನಡೆಸುವ ಕಾರ್ಯಕ್ರಮಗಳಿಗೆ ಮಾರುಹೋಗದೆ ಒಳ್ಳೆಯ ಜನಪ್ರತಿನಿಧಿಗಳನ್ನು ಮತ್ತು ಸರ್ಕಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಚುನಾವಣೆಯ ಈ ಹೊತ್ತಿನಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಸ್ವವಿಮರ್ಶೆ ಅಗತ್ಯ.
ಉಷಾ, ನಾಯನಹಳ್ಳಿ, ಚಿಕ್ಕಬಳ್ಳಾಪುರ.
ಕಟ್ಟಕಡೆಯ ವ್ಯಕ್ತಿಯೂ ಭಾಗೀದಾರ
ಸಾಮಾಜಿಕ ಕಾಳಜಿ ಹೊಂದಿರುವ, ಸದಾ ಜನಹಿತಕ್ಕೆ ಮಿಡಿಯುವ, ಮೌಲ್ಯಯುತ ಶಿಕ್ಷಣ ಪಡೆದಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಚುನಾವಣೆಯು ವೇದಿಕೆ ಆಗಬೇಕು. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಕೊಡುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಬೇಕು. ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಅಗ್ಗದ, ಜನಪ್ರಿಯ ಯೋಜನೆಗಳ ಘೋಷಣೆ ಬದಲಿಗೆ ಜನಸಾಮಾನ್ಯರ ಬದುಕನ್ನು ಮೇಲೆತ್ತುವ ದೂರದೃಷ್ಟಿಯ ಯೋಜನೆಗಳನ್ನು ಘೋಷಿಸಿ ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಚುನಾವಣೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಭಾಗೀದಾರನಾಗಿಸುವ ದಿಸೆಯಲ್ಲಿ ಚುನಾವಣಾ ಆಯೋಗ ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣಾ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಆಯೋಗ ಕೈಗೊಳ್ಳಬೇಕು.
ಲೀಲಾ ಎಲ್.ಡಿ, ಶಿಕ್ಷಕಿ, ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.