ಮಲಪ್ಪುರಂ: ಕಳ್ಳನೆಂದು ಶಂಕಿಸಿ ಬಿಹಾರ ಮೂಲದ ವ್ಯಕ್ತಿಯನ್ನು ಥಳಿಸಿ ಕೊಂದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಭಾನುವಾರ ಎಂಟು ಮಂದಿಯನ್ನು ಬಂಧಿಸಿದ್ದಾರೆ.
‘ರಾಜೇಶ್ ಮಂಜಿ ಮೃತ ವ್ಯಕ್ತಿ. ಈತ ಶನಿವಾರ ಇಲ್ಲಿನ ಮನೆಯೊಂದರ ಹೆಂಚು ತೆಗೆದು ಒಳನುಗ್ಗಲು ಯತ್ನಿಸಿ ಸಿಕ್ಕಿಬಿದ್ದಿದ್ದ. ಬಳಿಕ ಸ್ಥಳೀಯರು ಆತನನ್ನು ಕಂಬಕ್ಕೆ ಕಟ್ಟಿ ಪ್ಲಾಸ್ಟಿಕ್ ಪೈಪ್ ಮತ್ತು ಬಡಿಗೆಗಳಿಂದ ಮನಬಂದಂತೆ ಥಳಿಸಿದ್ದರು. ತೀವ್ರ ಗಾಯಗೊಂಡಿದ್ದ ಮಂಜಿ ಮೃತಪಟ್ಟಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಗಳು ಸಾಕ್ಷ್ಯನಾಶಕ್ಕೆ ಯತ್ನಿಸಿದ್ದರು. ಸಿ.ಸಿ.ಟಿ.ವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಅಳಿಸಿಹಾಕಲು ಪ್ರಯತ್ನಿಸಿದ್ದರು. ಆದರೆ ಎಲ್ಲ ಸಾಕ್ಷ್ಯಗಳೂ ನಮಗೆ ಲಭ್ಯವಾಗಿವೆ. ಸದ್ಯ ಎಂಟು ಮಂದಿಯನ್ನು ಬಂಧಿಸಿ, ಸಾಕ್ಷ್ಯನಾಶಕ್ಕೆ ಯತ್ನಿಸಿದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಲಪ್ಪುರ ಪೊಲೀಸ್ ಮುಖ್ಯಸ್ಥ ಸಜಿತ್ ದಾಸ್ ತಿಳಿಸಿದ್ದಾರೆ.
‘ಸಂತ್ರಸ್ತ ಕದಿಯುವ ಉದ್ದೇಶದಿಂದ ಈ ಪ್ರದೇಶಕ್ಕೆ ಬಂದಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಕಳೇಬರವನ್ನು ಆತನ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.