ಬೆಂಗಳೂರು: ನ್ಯೂಸ್‌ಕ್ಲಿಕ್ ಸುದ್ದಿತಾಣದ ಸಂಪಾದಕ ಪ್ರಬೀರ್ ಪುರಕಾಯಸ್ಥ ಸೇರಿದಂತೆ ಇಬ್ಬರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿರುವುದು ಹಾಗೂ ನ್ಯೂಸ್‌ಕ್ಲಿಕ್ ಜೊತೆ ನಂಟು ಹೊಂದಿದ್ದ 46 ಮಂದಿ ಸುದ್ದಿಗಾರರ ಮನೆಗಳ ಮೇಲೆ ಪೊಲೀಸರು ನಡೆಸಿದ ದಾಳಿಯು ಕಳವಳ ಮೂಡಿಸಿದೆ ಎಂದು ಎಂಟು ಮಂದಿ ಲೇಖಕರು, ಸಾಮಾಜಿಕ ಕಾರ್ಯಕರ್ತರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ನ್ಯೂಸ್‌ಕ್ಲಿಕ್ ಮೇಲೆ ಕೈಗೊಂಡಿರುವ ಕ್ರಮವು ಅಲ್ಲಿನ ಧೈರ್ಯಶಾಲಿ ದನಿಗಳನ್ನು ಹತ್ತಿಕ್ಕುವ ಯತ್ನ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆಗಳು ಬಹಳ ಅಗತ್ಯ. ದನಿಯನ್ನು ಹತ್ತಿಕ್ಕುವ ಯಾವುದೇ ಯತ್ನವು ಭಾರತದ ಪ್ರಜಾತಾಂತ್ರಿಕ ಆಶಯದ ಮೆಲಿನ ಹಲ್ಲೆ ಎಂದು ಅವರು ಟೀಕಿಸಿದ್ದಾರೆ.
ಈ ಹೇಳಿಕೆಗೆ ಸಾಮಾಜಿಕ ಕಾರ್ಯಕರ್ತೆಯರಾದ ಅರುಣಾ ರಾಯ್, ವಿ. ಗೀತಾ, ಲೇಖಕಿಯರಾದ ಗೀತಾಂಜಲಿ ಶ್ರೀ, ಕೆ.ಆರ್. ಮೀರಾ, ಪತ್ರಕರ್ತ ಪಿ. ಸಾಯಿನಾಥ್, ಲೇಖಕ ಪೆರುಮಾಳ್ ಮುರುಗನ್, ಇತಿಹಾಸಕಾರ ರಾಮಚಂದ್ರ ಗುಹಾ, ಗಾಯಕ ಟಿ.ಎಂ. ಕೃಷ್ಣ ಅವರು ಸಹಿ ಮಾಡಿದ್ದಾರೆ.
ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಹಾಗೂ ನ್ಯೂಸ್‌ಕ್ಲಿಕ್ ಸುದ್ದಿತಾಣದ ಕಚೇರಿಯ ಬಾಗಿಲು ಮುಚ್ಚಿಸುವ ಮೂಲಕ ಪ್ರಭುತ್ವವು, ಅನ್ಯಾಯವನ್ನು ಎತ್ತಿ ತೋರಿಸುವ ಕೆಲಸ ಮಾಡಿದ ಪತ್ರಕರ್ತರನ್ನು ಕಳಂಕಿತರು ಎಂಬಂತೆ ಚಿತ್ರಿಸಲು ಯತ್ನಿಸಿದೆ. ಹಲವು ಪತ್ರಕರ್ತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು ಹಾಗೂ ಅವರ ಫೋನ್‌ಗಳನ್ನು, ಲ್ಯಾಪ್‌ಟಾಪ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು ಎಂದು ಗೊತ್ತಾಗಿದೆ. ಇದು ಖಾಸಗಿತನದ ಉಲ್ಲಂಘನೆಯಷ್ಟೇ ಅಲ್ಲದೆ, ಅಕ್ರಮವೂ ಹೌದು ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
‘ಯುಎಪಿಎ ಅಡಿಯಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಸಾಧನಗಳಲ್ಲಿ ಕೆಲವು ಸಾಕ್ಷಿಗಳನ್ನು ಸೃಷ್ಟಿಸಿ ತುರುಕಿದ್ದ ವರದಿಗಳು ಇವೆ. ನ್ಯೂಸ್‌ಕ್ಲಿಕ್‌ನ ಪತ್ರಕರ್ತರಿಗೆ ಸಂಬಂಧಿಸಿದ ಪ್ರಕರಣದಲ್ಲಿಯೂ ಇದೇ ಬಗೆಯ ಯತ್ನಗಳು ನಡೆಯಬಹುದು ಎಂಬ ಆತಂಕ ನಮ್ಮದು’ ಎಂದು ಅವರು ಹೇಳಿದ್ದಾರೆ. ‘ಈ ಸಂದರ್ಭದಲ್ಲಿ ನ್ಯೂಸ್‌ಕ್ಲಿಕ್‌ನ ಎಲ್ಲ ಸಿಬ್ಬಂದಿ ಜೊತೆ ನಾವು ನಿಲ್ಲುತ್ತೇವೆ’ ಎಂದು ಕೂಡ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.