ನವದೆಹಲಿ: ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಸಿಬ್ಬಂದಿಗೆ ಕತಾರ್‌ನ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ. ಈ ಶಿಕ್ಷೆಗೆ ಭಾರತವು ಆಘಾತ ವ್ಯಕ್ತಪಡಿಸಿದೆ.
ಈ ಎಂಟೂ ಮಂದಿ ಅಲ್ ದಹ್ರಾ ಕಂಪನಿಯ ನೌಕರರಾಗಿದ್ದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಇವರನ್ನು ಶಂಕಿತ ಬೇಹುಗಾರಿಕೆ ಆರೋಪದ ಅಡಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಭಾರತೀಯ ಪ್ರಜೆಗಳ ಮೇಲಿನ ಆರೋಪಗಳು ಏನಿದ್ದವು ಎಂಬುದನ್ನು ಕತಾರ್ ಬಹಿರಂಗಪಡಿಸಿಲ್ಲ.
ಈ ಪ್ರಕರಣಕ್ಕೆ ಬಹಳ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಎಲ್ಲ ಬಗೆಯ ಕಾನೂನು ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ.
‘ನಮಗೆ ಈ ಎಂಟು ಜನರಿಗೆ ವಿಧಿಸಿರುವ ಶಿಕ್ಷೆಯ ವಿಚಾರವಾಗಿ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಮರಣದಂಡನೆ ವಿಧಿಸಲಾಗಿದೆ ಎಂಬುದನ್ನು ತಿಳಿದು ತೀವ್ರ ಆಘಾತವಾಗಿದೆ. ಇವರ ಕುಟುಂಬದ ಸದಸ್ಯರ ಜೊತೆ ಮತ್ತು ಕಾನೂನು ತಂಡದ ಜೊತೆ ಸಂಪರ್ಕದಲ್ಲಿದ್ದೇವೆ’ ಎಂದು ಸಚಿವಾಲಯ ತಿಳಿಸಿದೆ.
ಭಾರತೀಯರಿಗೆ ಎಲ್ಲ ಬಗೆಯ ರಾಜತಾಂತ್ರಿಕ ನೆರವು ಹಾಗೂ ಕಾನೂನು ನೆರವನ್ನು ನೀಡಲಾಗುತ್ತದೆ. ಆದೇಶದ ಬಗ್ಗೆ ಕತಾರ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದೆ.
‘ಈ ಪ್ರಕರಣದ ಗೋಪ್ಯತೆಯ ಕಾರಣದಿಂದಾಗಿ ಈ ಹಂತದಲ್ಲಿ ಇನ್ನೂ ಹೆಚ್ಚು ಮಾತನಾಡುವುದು ಸರಿಯಾಗಲಿಕ್ಕಿಲ್ಲ’ ಎಂದು ಸಚಿವಾಲಯ ಹೇಳಿದೆ. ಕತಾರ್‌ನಲ್ಲಿರುವ ಭಾರತದ ರಾಯಭಾರಿಯು ಈ ಎಂಟು ಮಂದಿಯನ್ನು ಅಕ್ಟೋಬರ್ 1ರಂದು ಜೈಲಿನಲ್ಲಿ ಭೇಟಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.